ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಕೋರುವ ನೀಲಮ್ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್
ನೀಲಮ್ ಆಝಾದ್ | Photo: PTI
ಹೊಸದಿಲ್ಲಿ: ತನ್ನನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆಗೊಳಿಸಬೇಕು ಎಂದು ಕೋರಿ ಸಂಸತ್ ನಲ್ಲಿ ದಾಂಧಲೆ ನಡೆಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾಗಿರುವ ನೀಲಮ್ ಆಝಾದ್ ಸಲ್ಲಿಸಿರುವ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ನೀಲಮ್ ಆಝಾದ್ ಈಗಾಗಲೇ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿರುವುದರಿಂದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಅಭಿಪ್ರಾಯಪಟ್ಟಿದೆ.
ಡಿಸೆಂಬರ್ 13ರಂದು, ಇಬ್ಬರು ಆರೋಪಿಗಳಾದ ಮನೋರಂಜನ್ ಡಿ ಮತ್ತು ಸಾಗರ್ ಶರ್ಮ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಚೇಂಬರ್ಗೆ ಜಿಗಿದು ಕ್ಯಾನ್ನಿಂದ ಬಣ್ಣದ ಅನಿಲವನ್ನು ಸಿಡಿಸಿದ್ದರು. ಸಂಸತ್ ನ ಹೊರಗೆ, ನೀಲಮ್ ಆಝಾದ್ ಮತ್ತು ಅಮೋಲ್ ಶಿಂದೆ ಕ್ಯಾನ್ ಗಳಿಂದ ಅನಿಲವನ್ನು ಹೊರಸೂಸಿ ‘‘ಸರ್ವಾಧಿಕಾರ ನಿಲ್ಲಿಸಿ’’ ಎಂಬ ಘೋಷಣೆಗಳನ್ನು ಕೂಗಿದ್ದರು.
ಪೊಲೀಸರು ಬಳಿಕ ಎಲ್ಲಾ ನಾಲ್ವರನ್ನು ಬಂಧಿಸಿದ್ದರು. ಜೊತೆಗೆ ಸಂಚಿನಲ್ಲಿ ಶಾಮೀಲಾದ ಆರೋಪದಲ್ಲಿ ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಎಂಬವರನ್ನೂ ಬಂಧಿಸಿದ್ದರು. ಬಂಧಿತರೆಲ್ಲರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಡಿಸೆಂಬರ್ 21ರಂದು ವಿಚಾರಣಾ ನ್ಯಾಯಾಲಯವೊಂದು ನೀಲಮ್ ಆಝಾದ್ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಿತ್ತು. ಇದನ್ನು ನೀಲಮ್ ಕಳೆದ ವಾರ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಳು.
ನ್ಯಾಯಾಲಯ ಕಲಾಪದ ವೇಳೆ ನನ್ನನ್ನು ಪ್ರತಿನಿಧಿಸಲು ನನ್ನ ಆಯ್ಕೆಯ ವಕೀಲರನ್ನು ನೇಮಿಸಲು ನನಗೆ ಅವಕಾಶ ನೀಡಲಾಗಿಲ್ಲ ಎಂದು ನೀಲಮ್ ತನ್ನ ಅರ್ಜಿಯಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಆದರೆ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎನ್ನುವುದನ್ನು ಸಾಬೀತುಪಡಿಸಲಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.