ನ್ಯೂಸ್ ಕ್ಲಿಕ್ ಪ್ರಕರಣ ಪ್ರಬೀರ್ ಪುರಕಾಯಸ್ಥ ಅರ್ಜಿ ತೀರ್ಪು ಕಾಯ್ಡಿರಿಸಿದ ಹೈಕೋರ್ಟ್
ದಿಲ್ಲಿ ಉಚ್ಚ ನ್ಯಾಯಾಲಯ
ಹೊಸದಿಲ್ಲಿ: ಭಯೋತ್ಪಾದನಾ ವಿರೋಧಿ ಕಾಯ್ದೆ ಯುಎಪಿಎ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ತಮ್ಮ ಬಂಧನ ಹಾಗೂ ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ‘ನ್ಯೂಸ್ ಕ್ಲಿಕ್’ನ ಸ್ಥಾಪಕ ಪ್ರಬೀರ್ ಪುರಕಾಯಸ್ಥ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ಅರ್ಜಿಯ ಕುರಿತ ತೀರ್ಪನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ಕಾಯ್ದಿರಿಸಿದೆ.
ಬಂಧನದ ಸಂದರ್ಭ ಅವರಿಗೆ ಕಾರಣಗಳನ್ನು ನೀಡದಿರುವುದು, ಅವರ ವಕೀಲರ ಅನುಪಸ್ಥಿತಿಯಲ್ಲಿ ವಿಚಾರಣಾ ನ್ಯಾಯಾಲಯ ಕಸ್ಟಡಿ ಆದೇಶ ನೀಡಿರುವುದು ಸೇರಿದಂತೆ ಹಲವು ಕಾನೂನು ಅಂಶಗಳ ಪ್ರಕಾರ ಅವರ ಬಂಧನ ಹಾಗೂ ರಿಮಾಂಡ್ ಕಾನೂನು ಬಾಹಿರ ಎಂದು ಪುರಕಾಯಸ್ಥ ಹಾಗೂ ಚಕ್ರವರ್ತಿ ಅವರ ಪರವಾಗಿ ಹಾಜರಾದ ನ್ಯಾಯವಾದಿ ಪ್ರತಿಪಾದಿಸಿದರು.
ಪೊಲೀಸರ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಅರ್ಜಿಯನ್ನು ವಿರೋಧಿಸಿದರು. ಪ್ರಕರಣ ಗಂಭೀರ ಅಪರಾಧಕ್ಕೆ ಸಂಬಂಧಿಸಿದೆ ಹಾಗೂ ಯುಎಪಿಎ ಅಡಿಯಲ್ಲಿ ಕಾನೂನು ಬದ್ಧ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಈ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೇಲಾ ಅವರು ತೀರ್ಪನ್ನು ಕಾಯ್ದಿರಿಸಿದರು.
ದಿಲ್ಲಿ ಪೊಲೀಸರ ವಿಶೇಷ ಘಟಕದಿಂದ ಅಕ್ಟೋಬರ್ 3ರಂದು ಬಂಧಿತರಾದ ಪುರಕಾಯಸ್ಥ ಹಾಗೂ ಚಕ್ರವರ್ತಿ ಅವರು ತಮ್ಮ ಬಂಧನ ಹಾಗೂ ತರುವಾಯ 7 ದಿನಗಳ ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ಕಳೆದ ವಾರ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ, ಮಧ್ಯಂತರ ಪರಿಹಾರವಾಗಿ ಕೂಡಲೇ ಬಿಡುಗಡೆ ಮಾಡುವಂತೆ ಕೋರಿದ್ದರು.