ಅತಿಹೆಚ್ಚು ಮಿಲಿಟರಿ ವೆಚ್ಚ: ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
ಸಾಂದರ್ಭಿಕ ಚಿತ್ರ Photo: PTI
ಹೊಸದಿಲ್ಲಿ: ಅತಿಹೆಚ್ಚು ಮಿಲಿಟರಿ ವೆಚ್ಚ ಮಾಡುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ. ಅಮೆರಿಕ, ಚೀನಾ ಹಾಗೂ ರಷ್ಯಾ ಮೊದಲ ಮೂರು ಸ್ಥಾನಗಳಲ್ಲಿವೆ. ಜಾಗತಿಕ ಮಟ್ಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕಳೆದ ಒಂದು ದಶಕದಲ್ಲಿ ಮಿಲಿಟರಿ ವೆಚ್ಚದ ದಾಖಲೆ 2443 ಶತಕೋಟಿ ಡಾಲರ್ ನಷ್ಟು ಹೆಚ್ಚಿದೆ.
ಆದರೆ ಭಾರತದ ಮಿಲಿಟರಿ ವೆಚ್ಚದಲ್ಲಿ ಅತಿದೊಡ್ಡ ಪಾಲು ಶಸ್ತ್ರಾಸ್ತ್ರಗಳ ಬದಲಾಗಿ 14 ಲಕ್ಷದಷ್ಟಿರುವ ಸಶಸ್ತ್ರ ಪಡೆಗಳ ವೇತನ ಮತ್ತು ಪಿಂಚಣಿ ಬಿಲ್ ಗಳಿಗೆ ವೆಚ್ಚವಾಗುತ್ತಿದೆ. ದುರ್ಬಲ ರಕ್ಷಣಾ ಉದ್ಯಮದ ನೆಲೆ ಮತ್ತು ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ಧೀರ್ಘಾವಧಿಯ ಸದೃಢ ನೀತಿ ಇಲ್ಲದಿರವುದು ಭಾರತದ ದುರ್ಬಲ ಅಂಶಗಳಾಗಿವೆ.
ಇದಕ್ಕೆ ಬದಲಾಗಿ ಚೀನಾ ತನ್ನ 20 ಲಕ್ಷ ಮಂದಿಯ ಸೇನಾಪಡೆಯನ್ನು ಕ್ಷಿಪ್ರವಾಗಿ ಆಧುನೀಕರಿಸಲು ಒತ್ತು ನೀಡಿದೆ. ಸಾಂಪ್ರದಾಯಿಕ ಕ್ಷೇತ್ರಗಳಾದ ಭೂಸೇನೆ, ವಾಯು ಹಾಗೂ ನೌಕಾಪಡೆಯ ಜತೆ, ಅಣ್ವಸ್ತ್ರ, ಬಾಹ್ಯಾಕಾಶ ಮತ್ತು ಸೈಬರ್ ಕ್ಷೇತ್ರದ ಆಧುನೀಕರಣಕ್ಕೆ ಯೋಜನೆ ಹಾಕಿಕೊಂಡಿದೆ. ಇದರಿಂದಾಗಿ ಸತತ 29ನೇ ವರ್ಷ ಅಧಿಕೃತವಾಗಿ ಘೋಷಿಸಲಾದ ಸೇನಾ ಬಜೆಟ್ ಭಾರತ ಮಾಡುವ ವೆಚ್ಚದ ನಾಲ್ಕು ಪಟ್ಟು ಅಧಿಕವಾಗಿದೆ.
ಚೀನಾದ ಮಿಲಿಟರಿ ವೆಚ್ಚ ಪ್ರಮುಖವಾಗಿ ತೈವಾನ್, ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ತಡೆಯಲು ವೆಚ್ಚವಾಗಿದ್ದರೂ, ಭಾರತದ ಜತೆಗಿನ 3488 ಕಿಲೋಮೀಟರ್ ಉದ್ದದ ವಾಸ್ತವ ನಿಯಂತ್ರಣ ರೇಖೆಯಲ್ಲಿ ತನ್ನ ತೋಳ್ಬಲ ಉಳಿಸಿಕೊಂಡಿದೆ. ಗಡಿಯಲ್ಲಿ ಸಂಘರ್ಷ ಕಡಿಮೆ ಮಾಡುವ ಯತ್ನಗಳನ್ನು ತಿರಸ್ಕರಿಸುವ ಜತೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ನೌಕಾ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ.
ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ಪೀಸ್ ರೀಸರ್ಚ್ ಇನ್ ಸ್ಟಿಟ್ಯೂಟ್ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2023ರಲ್ಲಿ ಜಾಗತಿಕ ಮಟ್ಟದಲ್ಲಿ ಸೇನಾ ವೆಚ್ಚ ಶೇಕಡ 6.8ರಷ್ಟು ಹೆಚ್ಚಿದೆ. ಅಮೆರಿಕ (916 ಶತಕೋಟಿ ಡಾಲರ್), ಚೀನಾ (296), ರಷ್ಯಾ (109), (ಭಾರತ (84), ಸೌದಿ ಅರೇಬಿಯಾ (76) ಮೊದಲ ಐದು ಸ್ಥಾನಗಳಲ್ಲಿವೆ.