ಹಣಕಾಸು ಬಿಕ್ಕಟ್ಟಿನಲ್ಲಿ ಹಿಮಾಚಲ ಪ್ರದೇಶ: ಎರಡು ತಿಂಗಳು ವೇತನ ಪಡೆಯದಿರಲು ಸಚಿವರ ನಿರ್ಧಾರ
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ - Photo : indiatoday
ಶಿಮ್ಲಾ: ಹಿಮಾಚಲ ಪ್ರದೇಶವು ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ಎಲ್ಲ ರಾಜ್ಯ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಸಂಪುಟ ದರ್ಜೆಯ ಸದಸ್ಯರು ಎರಡು ತಿಂಗಳುಗಳ ಕಾಲ ವೇತನಗಳು ಮತ್ತು ಭತ್ಯೆಗಳನ್ನು ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ಸಂಪುಟ ಸಭೆಯಲ್ಲಿ ಚರ್ಚೆಯ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯದ ಹಣಕಾಸು ಸ್ಥಿತಿಯು ಸುಧಾರಣೆಯಾಗುವವರೆಗೆ ಎರಡು ತಿಂಗಳುಗಳ ಕಾಲ ವೇತನ, ಪ್ರಯಾಣ ಭತ್ಯೆ, ತುಟ್ಟಿಭತ್ಯೆಗಳನ್ನು ಸ್ವೀಕರಿಸದಿರಲು ಸಂಪುಟದ ಎಲ್ಲ ಸದಸ್ಯರು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದರು.
ಹಿಮಾಚಲ ಪ್ರದೇಶದ ಹಣಕಾಸು ಬಿಕ್ಕಟ್ಟಿಗೆ ಭಾರೀ ಸಾಲಗಳು, ಹೆಚ್ಚುತ್ತಿರುವ ವೇತನ ಮತ್ತು ಪಿಂಚಣಿ ಮೊತ್ತಗಳು,ಕೇಂದ್ರದ ನೆರವಿನಲ್ಲಿ ಕುಸಿತ ಮತ್ತು ಅಸಮರ್ಪಕ ಆದಾಯ ಸೃಷ್ಟಿ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ.
ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಯ ಪುನರುಜ್ಜೀವನ, ಮಹಿಳೆಯರಿಗೆ 1,500 ರೂ.ಗಳನ್ನು ನೀಡುವ ಭರವಸೆ ಮತ್ತು ಉಚಿತ ವಿದ್ಯುತ್ನಂತಹ ಗ್ಯಾರಂಟಿಗಳು ಆರ್ಥಿಕ ಅವ್ಯವಸ್ಥೆಗೆ ಕಾರಣವಾಗಿದ್ದು, ಸರಕಾರದ ತಲೆಯ ಮೇಲೆ 86,589 ಕೋಟಿ ರೂ.ಗಳ ಸಾಲದ ಭಾರೀ ಹೊರೆಯಿದೆ. ಇದು ಮುಂದಿನ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ.ಗಳಿಗೆ ಹೆಚ್ಚುವ ನಿರೀಕ್ಷೆಯಿದೆ. ರಾಜ್ಯದ ಪ್ರತಿ ವ್ಯಕ್ತಿಯ ತಲೆಯ ಮೇಲೆ ತಲಾ 1.17 ಲಕ್ಷ ರೂ.ಗಳ ಸಾಲವಿದ್ದು, ಅರುಣಾಚಲ ಪ್ರದೇಶದ ಬಳಿಕ ಹಿಮಾಚಲ ಪ್ರದೇಶವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.
ರಾಜ್ಯ ಸರಕಾರವು ಐದು ಚುನಾವಣಾ ಭರವಸೆಗಳನ್ನು ಜಾರಿಗೊಳಿಸಿದೆ. ಈ ಪೈಕಿ 18ರಿಂದ 60 ವರ್ಷ ವಯೋಮಾನದ ಐದು ಲಕ್ಷ ಮಹಿಳೆಯರಿಗೆ ಮಾಸಿಕ 1,500 ರೂ. ನೀಡುವ ಗ್ಯಾರಂಟಿಗೆ ವಾರ್ಷಿಕ ಅಂದಾಜು 800 ಕೋಟಿ ರೂ.ಗಳು ವೆಚ್ಚವಾಗಲಿವೆ. ಒಪಿಎಸ್ ನ ಪುನರುಜ್ಜೀವನದಿಂದ 1.36 ಲಕ್ಷ ಉದ್ಯೋಗಿಗಳಿಗೆ ಲಾಭವಾಗಲಿದ್ದು. ಪ್ರತಿ ವರ್ಷ ಸರಕಾರದ ಬೊಕ್ಕಸಕ್ಕೆ 1,000 ಕೋಟಿ ರೂ.ಗಳ ಹೊರೆ ಬೀಳಲಿದೆ.
ರಾಜ್ಯ ಸರಕಾರವು ವೇತನಗಳಿಗಾಗಿ 20,639 ಕೋಟಿ ರೂ.ಗಳನ್ನು ವ್ಯಯಿಸುತ್ತದೆ ಮತ್ತು 2023-24ನೇ ಸಾಲಿನಲ್ಲಿ ಒಟ್ಟು ವೆಚ್ಚಗಳ ಶೇ.46.3ರಷ್ಟು ಬಡ್ಡಿ ಪಾವತಿಗಳಿಗೇ ಹೋಗುತ್ತದೆ.
ರಾಜ್ಯದಲ್ಲಿ 1,89,466 ಪಿಂಚಣಿದಾರರಿದ್ದು, 2030-31ರ ವೇಳೆಗೆ ಈ ಸಂಖ್ಯೆಯು 2,38,827ಕ್ಕೆ ಹೆಚ್ಚುವ ನಿರೀಕ್ಷೆಯಿದೆ. ಇದು ವಾರ್ಷಿಕ ಪಿಂಚಣಿ ಹೊರೆಯನ್ನು ಸುಮಾರು 20,000ಕೋಟಿ ರೂ.ಗಳಷ್ಟು ಹೆಚ್ಚಿಸಲಿದೆ.
ಇದರೊಂದಿಗೆ 680 ಕೋಟಿ ರೂ.ವೆಚ್ಚದ ರಾಜೀವ ಗಾಂಧಿ ಸ್ವಯಂ-ಉದ್ಯೋಗ ಸ್ಟಾರ್ಟ್ಅಪ್ ಯೋಜನೆಯ ಮೊದಲ ಹಂತದಡಿ ಇ-ಟ್ಯಾಕ್ಸಿ ಯೋಜನೆಯನ್ನು ಆರಂಭಿಸಲಾಗಿದೆ.
ರಾಜ್ಯದ ಬೊಕ್ಕಸವು ಖಾಲಿಯಾಗಿರುವುದರಿಂದ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಗಿದೆ. ಅದು ಈಗಾಗಲೇ ವಿದ್ಯುತ್ ಸಬ್ಸಿಡಿಯನ್ನು ಬಿಪಿಎಲ್, ಐಆರ್ಡಿಪಿ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ಮಾತ್ರ ಸೀಮಿತಗೊಳಿಸಿದೆ.
ಸುಖು ಸರಕಾರಕ್ಕೆ ಇನ್ನೊಂದು ಆಘಾತಕಾರಿ ಬೆಳವಣಿಗೆಯಲ್ಲಿ ಕೇಂದ್ರವು ಈ ಹಿಂದೆ ರಾಜ್ಯದ ಸಾಲದ ಮಿತಿಯನ್ನು 14,500 ಕೋ.ರೂ.ಗಳಿಂದ 9,000 ಕೋಟಿ ರೂ.ಗಳಿಗೆ ತಗ್ಗಿಸಿದೆ.