ಹಿಮಾಚಲ ಪ್ರದೇಶ ಉಪ ಚುನಾವಣೆ: 6 ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್ಗೆ ಜಯ
PC : PTI
ಶಿಮ್ಲಾ: ಹಿಮಾಚಲಪ್ರದೇಶ ವಿಧಾನ ಸಭೆಯ 6 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಬಿಜೆಪಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ.
ಕಾಂಗ್ರೆಸ್ನ ವಿಪ್ ಧಿಕ್ಕರಿಸಿದ ಹಾಗೂ ಅನಂತರ ಬಿಜೆಪಿ ಸೇರಿದ 6 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಹಿಮಾಚಲಪ್ರದೇಶ ವಿಧಾನ ಸಭೆಯ 6 ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.
ಹಿಮಾಚಲಪ್ರದೇಶದ ಸುಜಾನ್ಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕ್ಯಾಪ್ಟನ್ ರಂಜಿತ್ ಸಿಂಗ್ ಹಾಗೂ ಲಾಹೌಲ್ ಹಾಗೂ ಸ್ಟಿಟಿ ಕ್ಷೇತ್ರದ ಅನುರಾಧಾ ರಾಣಾ ಅವರು ಜಯ ಗಳಿಸಿದ್ದಾರೆ. ಗಾರ್ಗೆಟ್ ಕ್ಷೇತ್ರದ ಕಾಂಗ್ರೆಸ್ ರಾಕೇಶ್ ಕೈಲಾ ವಿಜಯಿಯಾಗಿದ್ದಾರೆ. ಕುಟ್ಲೆಹಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.
ಬಿಜೆಪಿ ಅಭ್ಯರ್ಥಿಗಳಾದ ಸುಧೀರ್ ಶರ್ಮಾ ಹಾಗೂ ಇಂದರ್ ದತ್ತ್ ಲಖನ್ಪಾಲ್ ಅವರು ಕ್ರಮವಾಗಿ ಧರ್ಮಶಾಲಾ ಹಾಗೂ ಬಸ್ರಾರ್ನಲ್ಲಿ ಜಯ ಗಳಿಸಿದ್ದಾರೆ.
ಪಕ್ಷದ ವಿಪ್ ಅನ್ನು ಧಿಕ್ಕರಿಸಿದ 6 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಬಳಿಕ ಲೋಕಸಭಾ ಚುನಾವಣೆಯೊಂದಿಗೆ ಧರ್ಮಶಾಲಾ, ಲಾಹೌಲ್-ಸ್ಪಿಟಿ, ಸುಜಾನ್ಪುರ, ಬಸ್ರಾರ್, ಗಾಗ್ರೆಟ್ ಹಾಗೂ ಕುಟ್ಲೆಹಾರ್ ಸೇರಿದಂತೆ 6 ವಿಧಾನ ಸಭಾ ಸ್ಥಾನಗಳಿಗೆ ಉಪ ಚುನಾವಣೆ ಅನಿವಾರ್ಯವಾಗಿತ್ತು.
ಶಾಸಕರಾದ ಸುಧೀರ್ ಶರ್ಮಾ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ತ್ ಲಖನ್ಪಾಲ್, ಚೈತನ್ಯ ಶರ್ಮಾ ಹಾಗೂ ದೇವಿಂದರ್ ಕುಮಾರ್ ಅವರು ಸದನದಲ್ಲಿ ಹಾಜರಾಗುವಂತೆ ಹಾಗೂ ರಾಜ್ಯ ಬಜೆಟ್ನ ಚರ್ಚೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿ ಮತ ಚಲಾಯಿಸುವಂತೆ ಪಕ್ಷ ನೀಡಿದ ನಿರ್ದೇಶನವನ್ನು ಅನುಸರಿಸಲು ನಿರಾಕರಿಸಿದ್ದರು.
ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತ ಚಲಾಯಿಸಿದ ಬಳಿಕ ಹೈ ವೋಲ್ಟೇಜ್ ಮಾಧ್ಯಮ ಡ್ರಾಮಾ ನಡೆದು 6 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಅನಂತರ ಈ 6 ಬಂಡಾಯ ಶಾಸಕರು ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿದ್ದರು.