ಹಿಮಾಚಲಪ್ರದೇಶ: ಕಸೋಲ್ ನಲ್ಲಿ ಸಿಲುಕಿದ 2,000 ಪ್ರವಾಸಿಗಳ ತೆರವು
Photo: PTI
ಶಿಮ್ಲಾ/ಕುಲು : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕುಲು ಜಿಲ್ಲೆಯ ಕಸೋಲ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 2,000ಕ್ಕೂ ಅಧಿಕ ಪ್ರವಾಸಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ಅವರು ಬುಧವಾರ ತಿಳಿಸಿದ್ದಾರೆ.
ಲಾಹೌಲ್ ನಲ್ಲಿ ಸಿಲುಕಿಕೊಂಡಿದ್ದ 300ಕ್ಕೂ ಅಧಿಕ ವಾಹನಗಳು ತಮ್ಮ ಗಮ್ಯ ಸ್ಥಾನ ತಲುಪಿವೆ ಎಂದು ಅವರು ತಿಳಿಸಿದ್ದಾರೆ. ಕುಲು-ಮನಾಲಿ ರಸ್ತೆ ಮಂಗಳವಾರ ಸಂಜೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಅನಂತರ ಸುಮಾರು 2,200 ವಾಹನಗಳು ಕುಲುವನ್ನು ದಾಟಿವೆ. ಮನಾಲಿಯ ಹಲವು ಪ್ರದೇಶಗಳು ಹಾಗೂ ಅದರ ಉಪ ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ. ಇದರಿಂದ ಪ್ರವಾಸಿಗರಿಗೆ ತಮ್ಮ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಕಸೋಲ್ ನಲ್ಲಿ ಸಿಲುಕಿದ್ದ 2,200ಕ್ಕೂ ಅಧಿಕ ಪ್ರವಾಸಿಗಳನ್ನು ಈಗ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ನಮ್ಮ ತಂಡ ಕಸೋಲ್-ಭುಂಟಾರ್ ರಸ್ತೆಯ ದುಂಖಾರದಲ್ಲಿ ಸಂಭವಿಸಿದ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಲು ದಣಿವಿಲ್ಲದೆ ಕಾರ್ಯನಿರ್ವಹಿಸುತ್ತಿದೆ’’ ಎಂದು ಅವರು ಹೇಳಿದ್ದಾರೆ. ಪರಿಹಾರ ಕಾರ್ಯಾಚರಣೆ ಸಂಯೋಜಿಸಲು ಸ್ಥಳೀಯಾಡಳಿತ ಭೂಕುಸಿತ ಸಂಭವಿಸಿದ ಸ್ಥಳದಲ್ಲಿದೆ. 2,200ಕ್ಕೂ ಅಧಿಕ ವಾಹನಗಳು ಕುಲು ಮೂಲಕ ಸುರಕ್ಷಿತವಾಗಿ ಹಾದು ಬಂದಿವೆ. ಪ್ರವಾಸಿಗರು ರಾಮ್ಶಿಲ್ಲಾ ಚೌಕ್ ನಲ್ಲಿ ಉತ್ತಮ ಆಹಾರವನ್ನು ಸ್ವೀಕರಿಸಿದ್ದಾರೆ.
‘‘ನಾನು ವೈಯುಕ್ತಿಕವಾಗಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಸವಾಲುಗಳನ್ನು ಎದುರಿಸಲು ಬದ್ಧನಾಗಿದ್ದೇನೆೆ’’ ಎಂದು ಸುಖ್ಖು ಟ್ವೀಟ್ನಲ್ಲಿ ಹೇಳಿದ್ದಾರೆ. ‘‘ಲಾಹೌಲ್ ನಲ್ಲಿ ಸಿಲುಕಿದ್ದ ಪ್ರವಾಸಿ ವಾಹನಗಳನ್ನು ಕೂಡ ರಾತ್ರಿ ತೆರವುಗೊಳಿಸಲಾಗಿದೆ. 300ಕ್ಕೂ ಅಧಿಕ ಪ್ರವಾಸಿ ವಾಹನಗಳು ತಮ್ಮ ಗಮ್ಯ ಸ್ಥಾನಕ್ಕೆ ಹಿಂದಿರುಗಿವೆ’’ ಎಂದು ಅವರು ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಪೊಲೀಸರು ಜನರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಹಾಗೂ ಅದನ್ನು ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದ ಎಎಸ್ಪಿ (ಕುಲು) ಆಶಿಶ್ ಶರ್ಮಾ ಅವರು ತಿಳಿಸಿದ್ದಾರೆ. ಅವರಿಗೆ ಪರಿಹಾರ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಆಹಾರ ಹಾಗೂ ಕುಡಿಯುವ ನೀರು ರಾಮ್ಶಿಲ್ಲಾ ಚೌಕ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.