ಹಿಮಾಚಲ ಪ್ರದೇಶ: ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಎರಡು ಬೆರಳು ಪರೀಕ್ಷೆ ; ವೈದ್ಯರಿಗೆ ಹೈಕೋರ್ಟ್ ತರಾಟೆ
Photo: indiatoday.in
ಶಿಮ್ಲಾ: ಪಾಲಂಪುರ ಸಿವಿಲ್ ಆಸ್ಪತ್ರೆಯಲ್ಲಿ ಅತ್ಯಾಚಾರ ಸಂತ್ರಸ್ತ ಬಾಲಕಿಯನ್ನು ಎರಡು ಬೆರಳು ಪರೀಕ್ಷೆಗೆ ಒಳಪಡಿಸಿದ ವೈದ್ಯರನ್ನು ಹಿಮಾಚಲಪ್ರದೇಶ ಉಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಬಾಲಕಿಗೆ 5 ಲಕ್ಷ ರೂ. ಪರಿಹಾರ ಪಾವತಿಸುವಂತೆ ಹಾಗೂ ಈ ಹಣವನ್ನು ತಪ್ಪೆಸಗಿದ ವೈದ್ಯರಿಂದ ಸಂಗ್ರಹಿಸುವಂತೆ ನ್ಯಾಯಾಲಯ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಮಕ್ಕಳ ಅತ್ಯಾಚಾರ ಪ್ರಕರಣದಲ್ಲಿ ವೈದ್ಯಕೀಯ ಕಾನೂನು ಪ್ರಕರಣ (ಎಂಎಲ್ಸಿ) ವರದಿ ಅವಮಾನಕರವಾಗಿದೆ ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿ ತಾರಲೋಕ್ ಸಿಂಗ್ ಚೌಹಾಣ್ ಹಾಗೂ ಸತ್ಯೇನ್ ವೈದ್ಯ ಅವರನ್ನು ಒಳಗೊಂಡ ಉಚ್ಚ ನ್ಯಾಯಾಲಯ ವಿಭಾಗೀಯ ಪೀಠ, ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರನ್ನು ವಿಚಾರಣೆಗೆ ಒಳಪಡಿಸುವಂತೆ ಸರಕಾರಕ್ಕೆ ನಿರ್ದೇಶಿಸಿದೆ.
‘‘ಎಂ ಎಲ್ ಸಿ ಅಪ್ರಾಪ್ತೆಯ ಖಾಸಗಿತನಕ್ಕೆ ಧಕ್ಕೆ ತರುತ್ತದೆ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಎರಡು ಬೆರಳು ಪರೀಕ್ಷೆ ಅತ್ಯಾಚಾರ ಸಂತ್ರಸ್ತ ಬಾಲಕಿಯ ದೈಹಿಕ ಹಾಗೂ ಮಾನಸಿಕ ಸಮಗ್ರತೆಯ ಉಲ್ಲಂಘನೆಯಾಗಿರುವುದರಿಂದ ಅದನ್ನು ನಡೆಸಿರುವ ವೈದ್ಯರನ್ನು ಪೀಠ ತರಾಟೆಗೆ ತೆಗೆದುಕೊಂಡಿದೆ.
ಇಂತಹ ಪರೀಕ್ಷೆ ನಡೆಸುವ ಎಲ್ಲಾ ವೈದ್ಯರಿಗೆ ಅದು ನಿರ್ದೇಶನ ನೀಡಿದೆ ಹಾಗೂ ಇಂತಹ ಪರೀಕ್ಷೆ ನಡೆಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.