ಜಾರ್ಖಂಡ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹುಸೇನಾಬಾದ್ ಗೆ ರಾಮ, ಕೃಷ್ಣ ಹೆಸರು ನಾಮಕರಣ: ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ | PC : PTI
ಜಾರ್ಖಂಡ್: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹುಸೇನಾಬಾದ್ ಉಪವಿಭಾಗವನ್ನು ಜಿಲ್ಲೆಯನ್ನಾಗಿ ಘೋಷಿಸಲಾಗುವುದು ಮತ್ತು ಜಿಲ್ಲೆಗೆ ಭಗವಾನ್ ರಾಮ ಅಥವಾ ಕೃಷ್ಣನ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಮತ್ತು ಜಾರ್ಖಾಂಡ್ ಚುನಾವಣಾ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಪಲಾಮು ಜಿಲ್ಲೆಯ ಜಾಪ್ಲಾ ಮೈದಾನದಲ್ಲಿ ನಡೆದ ಚುನಾವಣಾ ಸಮಾವೇಶದದಲ್ಲಿ ಹುಸೈನಾಬಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಮಲೇಶ್ ಸಿಂಗ್ ಪರ ಮತಯಾಚಿಸಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಿಂದ ನುಸುಳುಕೋರರನ್ನು ಓಡಿಸುವುದು ಪಕ್ಷದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹುಸೇನಾಬಾದ್ ನ್ನು ಜಿಲ್ಲೆಯನ್ನಾಗಿ ಘೋಷಿಸಿ ಅದಕ್ಕೆ ಶ್ರೀರಾಮ ಅಥವಾ ಕೃಷ್ಣನ ಹೆಸರಿಡಲಾಗುವುದು ಎಂದು ಹೇಳಿದ್ದಾರೆ.
ಬಾಂಗ್ಲಾದೇಶಿ ನುಸುಳುಕೋರರಿಂದಾಗಿ ಜಾರ್ಖಂಡ್ ನ ಜನಸಂಖ್ಯಾಶಾಸ್ತ್ರ ಬದಲಾಗುತ್ತಿದೆ. ಆದರೆ ಮತಬ್ಯಾಂಕ್ ಆಗಿರುವುದರಿಂದ ಆಡಳಿತರೂಢ ಜೆಎಂಎಂ ಈ ವಿಷಯದಲ್ಲಿ ಮೌನವಾಗಿದೆ. ಒಳನುಸುಳುಕೋರರನ್ನು ಹೊರದಬ್ಬುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜಾರ್ಖಂಡ್ ನಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕಲು ನಾವು NRC ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.