ಟ್ವಿಟರ್ ಬಯೋದಿಂದ ʼಇಂಡಿಯಾʼವನ್ನು ಕಿತ್ತು ಟ್ರೋಲ್ಗೊಳಗಾದ ಹಿಮಂತ ಬಿಸ್ವ ಶರ್ಮಾ

ಹಿಮಂತ ಬಿಸ್ವ ಶರ್ಮಾ | Photo: PTI
ಹೊಸದಿಲ್ಲಿ: ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಇಂಡಿಯಾ ಎಂಬ ನಾಮಕರಣ ಮಾಡುತ್ತಿದ್ದಂತೆ ಬಿಜೆಪಿಯ ನಾಯಕರು ಇಂಡಿಯಾ ಬದಲು ಭಾರತ್ ಪದವನ್ನು ಮುನ್ನಲೆಗೆ ತಂದಿದ್ದಾರೆ.
ಹಲವು ನಾಯಕರು ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಇಂಡಿಯಾ ಪದದ ಬದಲಿಗೆ ಭಾರತ್ ಎಂದು ಬದಲಾಯಿಸಿಕೊಂಡಿದ್ದಾರೆ.
“ನಮ್ಮ ನಾಗರಿಕ ಸಂಘರ್ಷವು ಇಂಡಿಯಾ ಮತ್ತು ಭಾರತದ ಸುತ್ತಲಿದೆ. ಬ್ರಿಟಿಷರು ನಮ್ಮ ದೇಶವನ್ನು ʼಇಂಡಿಯಾʼ ಎಂದು ಹೆಸರಿಸಿದರು. ವಸಾಹತುಶಾಹಿ ಪರಂಪರೆಯಿಂದ ಮುಕ್ತಿ ಹೊಂದಲು ನಾವು ಶ್ರಮಿಸಬೇಕು. ನಮ್ಮ ಪೂರ್ವಜರು ಭಾರತಕ್ಕಾಗಿ ಹೋರಾಡಿದರು ಮತ್ತು ನಾವು ಭಾರತಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಭಾರತಕ್ಕಾಗಿ ಬಿಜೆಪಿ” ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದಾರೆ.
ನೆಟ್ಟಿಗರು ಶರ್ಮ ಅವರ ಟ್ವಿಟರ್ ಖಾತೆಯಲ್ಲಿ 'ಇಂಡಿಯಾ' ಎಂದು ಬರೆದಿರುವುದನ್ನು ನೆನಪಿಸಿದ ಬಳಿಕ ಅವರು 'ಇಂಡಿಯಾ' ಇದ್ದಲ್ಲಿ 'ಭಾರತ್' ಎಂದು ಬದಲಾಯಿಸಿಕೊಂಡಿದ್ದಾರೆ.
ಈ ಟ್ವೀಟ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದು ಪರ-ವಿರೋಧ ಚರ್ಚೆಗಳಾಗಿವೆ. ಬಿಜೆಪಿ ನಾಯಕರ ಈ ಹಠಾತ್ ಬದಲಾವಣೆಗೆ ಹಲವರು ವ್ಯಂಗ್ಯವಾಡಿದ್ದು, ಶರ್ಮಾ ಅವರು ಬಯೋದಲ್ಲಿ ಇಂಡಿಯಾವನ್ನು ಬದಲಿಸಿದ್ದರು, ಟ್ವಿಟರ್ ಲೊಕೇಶನ್ನಲ್ಲಿ ʼಗುವಾಹಟಿ-ಇಂಡಿಯಾʼ ಅಂತಲೇ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕೌಶಿಕ್ ರಾಜ್ ಎಂಬವರು ಪ್ರತಿಕ್ರಿಯಿಸಿ, "ಹಾಗಿದ್ದರೆ ಈಗಾಗಲೇ ಮೈತ್ರಿಕೂಟದ ʼINDIAʼ ಪದ ಕೆಲಸ ಮಾಡಲು ಆರಂಭಿಸಿದೆ" ಎಂದಿದ್ದಾರೆ. ರಾಜಾ ಎಂಬವರು ಪ್ರತಿಕ್ರಿಯಿಸಿ "ಇಂಡಿಯಾ ಪರಿಣಾಮ ಬಿದ್ದಿದೆ. ಅಭದ್ರತೆ ಶುರುವಾಗಿದೆ" ಎಂದಿದ್ದಾರೆ.
ಇನ್ನು ಕೆಲವರು ಶರ್ಮಾ ಅವರಿಗೆ ಬೆಂಬಲಿಸಿದ್ದು, "ನಮಗೆ ಈಸ್ಟ್ ʼಇಂಡಿಯಾʼ ಕಂಪೆನಿಯಿಂದ ಸ್ವಾತಂತ್ರ್ಯ ಸಿಕ್ಕಿದೆ" ಎಂದಿದ್ದಾರೆ.
ಒಟ್ಟಾರೆ, ಮೈತ್ರಿಕೂಟದ ಹೆಸರು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳನ್ನು ಸೃಷ್ಟಿಸಿದೆ.