ಮುಸ್ಲಿಂ ವ್ಯಕ್ತಿಯ ಒಡೆತನದ ವಿವಿಯ ಮಕ್ಕಾ ರೀತಿಯ ನಿರ್ಮಾಣದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅಸ್ಸಾಂ ಸಿಎಂ
ಸಂಸ್ಥೆಯ ವಾಸ್ತುಶಿಲ್ಪವನ್ನು ʼಜಿಹಾದ್ʼ ಸಂಕೇತ ಎಂದ ಹಿಮಂತ್ ಬಿಸ್ವ ಶರ್ಮ
ಹಿಮಂತ್ ಬಿಸ್ವ ಶರ್ಮ (PTI)
ಗುವಾಹಟಿ: ಗುವಾಹಟಿಯ ಸಮೀಪವಿರುವ ಯುನಿವರ್ಸಿಟಿ ಆಫ್ ಸಾಯನ್ಸ್ ಎಂಡ್ ಟೆಕ್ನಾಲಜಿ, ಮೇಘಾಲಯ ಎಂಬ ಬಂಗಾಳ ಮೂಲದ ಮುಸ್ಲಿಂ ವ್ಯಕ್ತಿಯ ಒಡೆತನದ ಶಿಕ್ಷಣ ಸಂಸ್ಥೆಯ ವಿರುದ್ಧ ನೆರೆ ಜಿಹಾದ್ ಆರೋಪ ಹೊರಿಸಿದ ನಂತರ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಅವರು ಮತ್ತೆ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಶಿಕ್ಷಣವನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸಂಸ್ಥೆಯ ಗುಮ್ಮಟ ಆಕೃತಿಯ ಗೇಟ್ನ ವಾಸ್ತುಶಿಲ್ಪ ʼಜಿಹಾದ್ʼ ಸಂಕೇತವಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಯುನಿವರ್ಸಿಟಿ ಆಫ್ ಸಾಯನ್ಸ್ ಎಂಡ್ ಟೆಕ್ನಾಲಜಿ, ಮೇಘಾಲಯ ಇದರ ಆವರಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು ನಗರದಲ್ಲಿ ದಿಢೀರ್ ಪ್ರವಾಹಕ್ಕೆ ಕಾರಣವಾಗಿದೆ ಎಂದು ಕಳೆದ ವಾರ ಶರ್ಮ ಆರೋಪಿಸಿದ್ದರು. ಮೇಘಾಲಯದ ರಿ-ಭೊಯಿ ಜಿಲ್ಲೆಯಲ್ಲಿರುವ ಈ ಸಂಸ್ಥೆಯಲ್ಲಿ ಮರಗಳನ್ನು ಕಡಿದಿರುವುದು ಹಾಗೂ ಗುಡ್ಡ ಅಗೆದಿರುವುದು ನೆರೆಗೆ ಕಾರಣವೆಂದು ಅವರು ದೂರಿದ್ದರು.
ಈ ವಿವಿಯನ್ನು ಮಹಬುಬಲ್ ಹಖ್ ಸ್ಥಾಪಿಸಿದ್ದ ಎಜುಕೇಶನ್ ರಿಸರ್ಚ್ ಎಂಡ್ ಡೆವಲೆಪ್ಮೆಂಟ್ ಫೌಂಡೇಶನ್ ನಡೆಸುತ್ತಿದೆ. ಹಖ್ ಅವರು ವಿವಿಯ ಕುಲಪತಿಯಾಗಿದ್ದಾರೆ.
ಸೋಮವಾರ ಶರ್ಮ ಮತ್ತೆ ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿವಿಯ ಮುಖ್ಯ ಗೇಟಿನ ಮೇಲ್ಭಾಗದಲ್ಲಿರುವ ಮೂರು ಗುಮ್ಮಟಗಳನ್ನು ಗುರಿ ಮಾಡಿದ್ದಾರೆ. “ಅಲ್ಲಿಗೆ ಹೋಗಲು ಮುಜುಗರವಾಗುತ್ತಿದೆ. “ಮಕ್ಕಾ”ದ ಅಡಿಯಲ್ಲಿ ಹೋಗಬೇಕಿದೆ. ಅಲ್ಲಿ ನಾಮಘರ್ (ಅಸ್ಸಾಂನ ನವ-ವೈಷ್ಣವ ಸಂಪ್ರದಾಯದ ಸಮುದಾಯ ಪ್ರಾರ್ಥನಾ ಕೊಠಡಿ) ಇರಬೇಕು. ಮಕ್ಕಾ-ಮದೀನಾ ಚರ್ಚ್, ಎಲ್ಲಾ ಮೂರು ಇರಲಿ, ಅವರು ಅಲ್ಲಿ ಮಕ್ಕಾ ಇಟ್ಟಿದ್ದಾರೆ. ,ಅಲ್ಲಿ ನಾಮಘರ್ ಮತ್ತು ಚರ್ಚ್ ಇರಲಿ, ಎಲ್ಲಾ ಮೂರರ ಅಡಿಯಲ್ಲಿ ನಡೆಯುತ್ತೇವೆ, ಏಕೆ ಒಂದರ ಅಡಿಯಲ್ಲಿ ಮಾತ್ರ ನಡೆಯಬೇಕು,” ಎಂದು ಅವರು ಹೇಳಿದರು.
“ಯಾರು ನಮ್ಮ ನಾಗರಿಕತೆಯ, ಸಂಸ್ಕೃತಿ ಮೇಲೆ ದಾಳಿ ನಡೆಸಿದರೂ ಅದನ್ನು ಜಿಹಾದ್ ಎನ್ನಲಾಗುತ್ತದೆ,” ಎಂದು ಅವರು ಹೇಳಿದರು.