ಸೆಬಿ ಅಧ್ಯಕ್ಷೆ ಕುರಿತ ಹಿಂಡನ್ಬರ್ಗ್ ವರದಿ | ಜೆಪಿಸಿ ತನಿಖೆಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ : ಭಾರತೀಯ ಸೆಕ್ಯುರಿಟಿಸ್ ಹಾಗೂ ಶೇರು ವಿನಿಯಮ ಮಂಡಳಿ ( ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ವಿರುದ್ಧ ಅಮೆರಿಕದ ಶಾರ್ಟ್ ಸೆಲ್ಲರ್ ಕಂಪೆನಿ ಹಿಂಡನ್ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕೆಂದು ಕಾಂಗ್ರೆಸ್ ಪಕ್ಷವು ರವಿವಾರ ಕರೆ ನೀಡಿದೆ.
‘ಅದಾನಿ ಗ್ರೂಪ್’ ತನ್ನ ಕಂಪೆನಿಗಳ ಶೇರು ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲು ಬಳಸುತ್ತಿದ್ದ ಸಾಗರೋತ್ತರ ದೇಶಗಳ ನಿಧಿಯಲ್ಲಿ ಮಾಧವಿ ಬುಚ್ ಅವರು ಹೂಡಿಕೆಗಳನ್ನು ಹೊಂದಿದ್ದರು ಎಂದು ಹಿಂಡನ್ಬರ್ಗ್ ಶನಿವಾರ ಆಪಾದಿಸಿತ್ತು.
ಸೆಬಿಯ ನಿಷ್ಪಕ್ಷಪಾತದ ಕುರಿತು ಪ್ರಶ್ನೆಗಳನ್ನು ಮೂಡಿಸುವಂತಹ ಈ ಆರೋಪಗಳಿಗೆ ಸಂಬಂಧಿಸಿ ಕೇಂದ್ರ ಸರಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷವು ಆಗ್ರಹಿಸಿದೆ. ಈ ಹಗರಣದಲ್ಲಿ ದೇಶದ ಅತ್ಯುನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಹಿಂಡನ್ಬರ್ಗ್ ಆಪಾದಿಸಿರುವುದರಿಂದ, ಈ ನಿಟ್ಟಿನಲ್ಲಿ ಸಮಗ್ರ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯನ್ನು ನೇಮಿಸುವಂತೆಯೂ ಕಾಂಗ್ರೆಸ್ ಪಕ್ಷವು ಆಪಾದಿಸಿದೆ.
ಸೆಬಿ ಅಧ್ಯಕ್ಷೆ ವಿರುದ್ಧ ಹಿಂಡನ್ಬರ್ಗ್ನ ಆರೋಪಕ್ಕೆ ಸಂಬಂಧಿಸಿದಂತೆ ಜೈರಾಮ್ ರಮೇಶ್ ಇನ್ನೊಂದು ಪ್ರತ್ಯೇಕ ಹೇಳಿಕೆಯನ್ನು ನೀಡಿದ್ದು ಆದಾನಿಯ ಬೃಹತ್ ಹಗರಣದ ಬಗ್ಗೆ ತನಿಖೆಗೆ ಸೆಬಿಯು ಹಿಂದೇಟು ಹಾಕುತ್ತಿರುವುದು ಸುಪ್ರೀಂಕೋರ್ಟ್ನ ತಜ್ಞರ ಸಮಿತಿಯ ಗಮನಕ್ಕೂ ಬಂದಿದೆಯೆಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ವಿದೇಶಿ ನಿಧಿಗಳ ನೈಜ ಫಲಾನುಭವಿ ಮಾಲಕತ್ವವನ್ನು ಬಹಿರಂಗಪಡಿಸಬೇಕೆಂಬ ನಿಯಮವನ್ನು ಸೆಬಿಯು 2018ರಲ್ಲಿ ದುರ್ಬಲಗೊಳಿಸಿತ್ತು. 2019ರಲ್ಲಿ ಆ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದನ್ನು ಸುಪ್ರೀಂಕೋರ್ಟ್ ನಿಯೋಜಿತ ಸಮಿತಿಯು ಗಮನಕ್ಕೆ ತೆಗೆದುಕೊಂಡಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಆದಾನಿ ಹಗರಣ ಬಯಲಿಗೆ ಬಂದ ಬಳಿಕ ಸಾರ್ವಜನಿಕ ಒತ್ತಡಕ್ಕೆ ಒಳಗಾಗಿ ಸೆಬಿಯ ಮಂಡಳಿಯು 2023ರ ಜೂನ್ 28ರಂದು ಈ ನಿಯಮವನ್ನು ಮರಳಿ ಜಾರಿಗೆ ತಂದಿತ್ತು. 2023ರ ಆಗಸ್ಟ್ 25ರಂದು ವಿದೇಶಿ ನಿಧಿಗಳಿಗೆ ನಡೆದಿಯೆನ್ನಲಾದ 13 ಶಂಕಾಸ್ಪದ ಹಣವರ್ಗಾವಣೆಗಳ ಬಗ್ಗೆ ತಾನು ತನಿಖೆ ನಡೆಸುವುದಾಗಿ ತಜ್ಞರ ಸಮಿತಿ ತಿಳಿಸಿತ್ತು. ಆದರೂ ಈ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲವೆಂದು ಅದು ಹೇಳಿದೆ.
ಮಾಧವಿ ಬುಚ್ ಹಾಗೂ ಆಕೆಯ ಪತಿಯು ಆದಾನಿಗೆ ಸೇರಿದ ಬರ್ಮುಡಾ ಹಾಗೂ ಮಾರಿಷಸ್ಗಳಲ್ಲಿ ನಿಧಿಗಳಲ್ಲಿ ಹೂಡಿಕೆಗಳನ್ನು ಮಾಡಿದ್ದರು ಎಂಬುದನ್ನು ಹಿಂಡನ್ಬರ್ಗ್ ಶನಿವಾರ ಪ್ರಕಟಿಸಿದ ವರದಿಯು, ಅನಾವರಣಗೊಳಿಸಿರುವುದಾಗಿ ವರದಿ ಹೇಳಿದೆ.
ಅದಾನಿ ಹಗರಣದ ಕುರಿತು ತಾನು ವರದಿ ಮಾಡಿ 18 ತಿಂಗಳುಗಳೇ ಕಳೆದಿವೆ. ಆದರೆ ಮಾರಿಶಸ್ ಮತ್ತಿತರ ಕಡಲಾಚೆಯ ದೇಶಗಳಲ್ಲಿನ ಆದಾನಿ ಹೊಂದಿದ್ದಾರೆನ್ನಲಾದ ಶೆಲ್ ಕಂಪೆನಿಗಳ ಅಜ್ಞಾತ ಜಾಲದ ಬಗ್ಗೆ ತನಿಖೆ ನಡೆಸಲು ಸೆಬಿಯು ಆಸಕ್ತಿ ತೋರುತ್ತಿಲ್ಲವೆಂದು ಹಿಂಡನ್ಬರ್ಗ್ ತನ್ನ ವರದಿಯಲ್ಲಿ ಆಪಾದಿಸಿದೆ.