ಅದಾನಿ ವರದಿ ಪ್ರಕಟಣೆಗೆ 2 ತಿಂಗಳು ಮೊದಲೇ ಅಮೆರಿಕನ್ ಕಂಪೆನಿ ಜೊತೆ ಹಂಚಿಕೊಂಡಿದ್ದ ಹಿಂಡೆನ್ಬರ್ಗ್ | ಸೆಬಿಯಿಂದ ಶೋಕಾಸ್ ನೋಟಿಸ್
Photo: PTI
ಮುಂಬೈ : ಅಮೆರಿಕದ ಶಾರ್ಟ್ಸೆಲ್ಲರ್ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್, ಆದಾನಿ ಉದ್ಯಮಸಮೂಹದ ಕುರಿತ ಗಂಭೀರ ಆರೋಪ ಮಾಡಿದ ವರದಿಯನ್ನು ಬಹಿರಂಗಪಡಿಸುವ 2 ತಿಂಗಳು ಮೊದಲೇ ಅದರ ಮುಂಗಡಪ್ರತಿಯನ್ನು ನ್ಯೂಯಾರ್ಕ್ ಮೂಲದ ‘ಹೆಡ್ಜ್ ಫಂಡ್’ ಕಂಪೆನಿಯ ಮ್ಯಾನೇಜರ್ ಮಾರ್ಕ್ ಕಿಂಗ್ಡನ್ ಅವರೊಂದಿಗೆ ಹಂಚಿಕೊಂಡಿದ್ದಾಗಿ ಭಾರತೀಯ ಶೇರು ನಿಯಂತ್ರಣ ಸೆಬಿ ಆಪಾದಿಸಿದೆ.
ಈ ಬಗ್ಗೆ ಸೆಬಿಯು ಹಿಂಡೆನ್ಬರ್ಗ್ ರಿಸರ್ಚ್ಗೆ 46 ಪುಟಗಳ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, 21 ದಿನಗಳೊಳಗೆ ಉತ್ತರಿಸುವಂತೆ ಅದೇಶಿಸಿದೆ.
ವರದಿ ಪ್ರಕಟವಾದ ಬಳಿಕ ಆದಾನಿ ಸಮೂಹದ 10 ಲಿಸ್ಟಡ್ ಕಂಪೆನಿಗಳ ಮಾರುಕಟ್ಟೆ ಮೌಲ್ಯವು ಕುಸಿದ ಪರಿಣಾಮವಾಗಿ ಕಿಂಗ್ಡನ್ ಅವರ ಹೆಡ್ಜ್ಫಂಡ್ ಹಾಗೂ ಕೋಟಕ್ ಮಹೀಂದ್ರಾ ಸಂಸ್ಥೆಯ ಜೊತೆ ನಂಟು ಹೊಂದಿರುವ ಶೇರು ದಲ್ಲಾಳಿಯೊಬ್ಬರು ಭಾರೀ ಲಾಭ ಮಾಡಿಕೊಂಡಿದ್ದಾರೆಂದು ಶೋಕಾಸ್ ನೋಟಿಸ್ ನಲ್ಲಿ ಆಪಾದಿಸಲಾಗಿದೆ.
ಒಳಸಂಚು ನಡೆಸಿ, ಸಾರ್ವಜನಿಕೇತರ ಮತ್ತು ದಾರಿತಪ್ಪಿಸುವ ಮಾಹಿತಿಗಳನ್ನು ನೀಡುವ ಮೂಲಕ ಆದಾನಿ ಸಮೂಹದ ಶೇರುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಮಾಡಿ, ಹಿಂಡೆನ್ಬರ್ಗ್ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಲಾಭ ಗಳಿಸಿರುವುದಾಗಿ ಶೋಕಾಸ್ ನೋಟಿಸ್ ನಲ್ಲಿ ಆಪಾದಿಸಲಾಗಿದೆ.
ಆದಾನಿಸಮೂಹದ ಶೇರುಗಳು ಪಾತಾಳಕ್ಕೆ ಕುಸಿಯಲು ಕಾರಣವಾದ ವಿವಾದಿತ ವರದಿಯ ಪ್ರಕಟಣೆಗೆ ಚೀನಿ ನಂಟು ಹೊಂದಿರುವ ಉದ್ಯಮಿಯೊಬ್ಬರು ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆಯನ್ನು ನಿಯೋಜಿಸಿದ್ದರೆಂದು ಹಿರಿಯ ನ್ಯಾಯವಾದಿ ಮಹೇಶ್ ಜೇಠ್ಮಲಾನಿ ಕಳೆದ ವಾರ ಆಪಾದಿಸಿದ್ದರು.
ಕಿಂಗ್ಡನ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಎಲ್ಎಲ್ಸಿ ಸಂಸ್ಥೆಯ ಹಿಂದಿರುವ ಅಮೆರಿಕನ್ ಉದ್ಯಮಿಯೊಬ್ಬರು ಆದಾನಿ ಗ್ರೂಪ್ ಬಗ್ಗೆ ವರದಿಯನ್ನು ಸಿದ್ಧಪಡಿಸಲು ಹಿಂಡನ್ಬರ್ಗ್ ಅನ್ನು ನಿಯೋಜಿಸಿದ್ದರು ಎಂದು ಜೇಠ್ಮಲಾನಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ ಆಪಾದಿಸಿದ್ದರು.
ಯಾವುದೇ ಕಂಪೆನಿ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಕ್ಕೆ ಮೊದಲು ಸೆಬಿ ಶೋಕಾಸ್ ನೋಟಿಸ್ ಜಾರಿಗೊಳಿಸುತ್ತದೆ. ಬಳಿಕ ಅಂತಹ ಕಂಪೆನಿಯಲ್ಲಿ ದಂಡವಿಧಿಸುವುದು ಹಾಗೂ ಭಾರತದ ಶೇರು ಮಾರುಕಟ್ಟೆ ವ್ಯವಹಾರದಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರುವ ಸಾಧ್ಯತೆಯಿರುತ್ತದೆ.
ಶೇರು ಮಾರುಕಟ್ಟೆಯಲ್ಲಿ ಅದಾನಿ ಕಂಪೆನಿಯ ಶೇರುಗಳನ್ನು ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಆದಾನಿ ಸಮೂಹದ ಶೇರುಗಳು ಮಾರಾಟವಾಗುತ್ತಿವೆ ಎಂದು 2023ರಲ್ಲಿ ಪ್ರಕಟವಾದ ಹಿಂಡೆನ್ಬರ್ಗ್ ವರದಿ ಆಪಾದಿಸಿತ್ತು.ಆದರೆ ಈ ವರದಿಯಲ್ಲಿ ದುರುದ್ದೇಶದಿಂದ ವಾಸ್ತವಾಂಶಗಳನ್ನು ತಿರುಚಲಾಗಿದೆಯೆಂದು ಸೆಬಿ ಶೋಕಾಸ್ ನೋಟಿಸ್ ನಲ್ಲಿ ತಿಳಿಸಿದೆ.