ಹಿಂದಿ ಹಂತಹಂತವಾಗಿ ಸಾಮಾನ್ಯ ರಾಷ್ಟ್ರೀಯ ಭಾಷೆಯಾಗುವತ್ತ ಮುನ್ನಡೆಯಬೇಕು: ಆರೆಸ್ಸೆಸ್

ಸಾಂದರ್ಭಿಕ ಚಿತ್ರ | PC : PTI
ಮುಂಬೈ: ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ತಮಿಳುನಾಡು ಮುಖ್ಯುಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ ಬೆನ್ನಿಗೇ, ಸ್ವಾರ್ಥ ಉದ್ದೇಶಗಳಿಗಾಗಿ ಹಿಂದಿಯನ್ನು ಟೀಕಿಸಲಾಗುತ್ತಿದೆ ಎಂದು ಶನಿವಾರ ಆರೋಪಿಸಿರುವ ಅರೆಸ್ಸೆಸ್ ಪದಾಧಿಕಾರಿ ಅರುಣ್ ಕುಮಾರ್, ಹಿಂದಿ ಹಂತಹಂತವಾಗಿ ಸಾಮಾನ್ಯ ರಾಷ್ಟ್ರೀಯ ಭಾಷೆಯಾಗುವತ್ತ ಮುನ್ನಡೆಯಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದಲ್ಲಿನ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳಾಗಿದ್ದು, ಇಲ್ಲಿ ಯಾವುದೇ ಪ್ರಾಂತೀಯ ಭಾಷೆಗಳಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.
ತಮಿಳುನಾಡಿನ ಲಕ್ಷಾಂತರ ಮಂದಿ ಹಿಂದಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಮಾಡುತ್ತಿದ್ದು, ಸ್ವಾರ್ಥ ಉದ್ದೇಶಗಳಿಗಾಗಿ ಹಿಂದಿಯನ್ನು ವಿರೋಧಿಸುತ್ತಿರುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಎಬಿಪಿ ನೆಟ್ವರ್ಕ್ ಆಯೋಜಿಸಿದ್ದ ಐಡಿಯಾಸ್ ಇಂಡಿಯಾ ಸಮಿತ್ 2025ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾಷೆಗಳ ಕುರಿತು ಸೃಷ್ಟಿಯಾಗುತ್ತಿರುವ ವ್ಯಾಜ್ಯಗಳು ದುರದೃಷ್ಟಕರವಾಗಿದ್ದು, ಪ್ರತಿ ರಾಜ್ಯವೂ ತನ್ನದೇ ಭಾಷೆಯನ್ನು ಬೆಳೆಸಬೇಕು ಹಾಗೂ ಆ ನಿರ್ದಿಷ್ಟ ಭಾಷೆಯಲ್ಲಿ ವ್ಯವಹಾರವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದ್ದಾರೆ.
“ನಾವು ಆಡಳಿತಾತ್ಮಕ ವ್ಯವಸ್ಥೆಯನ್ನು ಹೊಂದಿದ್ದು, ನಮಗೆ ಸಾಮಾನ್ಯ ರಾಷ್ಟ್ರೀಯ ಭಾಷೆಯ ಅಗತ್ಯವಿದೆ. ಒಂದು ಹಂತದಲ್ಲಿ ಅದು ಸಂಸ್ಕೃತವಾಗಿತ್ತು. ಆದರೆ, ಇಂದು ಅದು ಸಾಧ್ಯವಿಲ್ಲ. ಹೀಗಾಗಿ, ಇಂದು ಅದು ಹಿಂದಿಯಾಗಬಹುದಾಗಿದೆ” ಎಂದು ಅವರು ಹೇಳಿದ್ದಾರೆ.
“ನಿಮಗೆ ಹಿಂದೆ ಬೇಡದಿದ್ದರೆ, ನೀವು ಒಂದು ರಾಷ್ಟ್ರೀಯ ಭಾಷೆಯನ್ನು ಹೊಂದಬೇಕಾಗುತ್ತದೆ. ಒಂದು ವೇಳೆ ಅದು ಇಂಗ್ಲೀಷ್ ಆದರೆ, ಅದು ಸಾಮಾನ್ಯ ರಾಷ್ಟ್ರೀಯ ಭಾಷೆಯಾಗಲು ಸಾಧ್ಯವಿಲ್ಲ. ಬದಲಿಗೆ, ಅದು ಸಾಮಾನ್ಯ ಅಂತಾರಾಷ್ಟ್ರೀಯ ಭಾಷೆಯಾಗಲಿದೆ” ಎಂದು ಅವರು ಹೇಳಿದ್ದಾರೆ.
ಅರೆಸ್ಸೆಸ್ ನ ಎರಡನೆ ಮುಖ್ಯಾಸ್ಥ ಎಂ.ಎಸ್.ಗೋಳ್ವಾಲ್ಕರ್ ರನ್ನು ಉಲ್ಲೇಖಿಸಿದ ಅರುಣ್ ಕುಮಾರ್, ಒಂದು ವೇಳೆ ಇಂಗ್ಲೀಷ್ ಅನ್ನು ಸಾಮಾನ್ಯ ರಾಷ್ಟ್ರೀಯ ಭಾಷೆಯನ್ನಾಗಿಸಿದರೆ, ರಾಜ್ಯಗಳ ಭಾಷೆಗಳ ಅಸ್ತಿತ್ವಕ್ಕೆ ಗಂಡಾಂತರ ಎದುರಾಗಲಿದೆ ಎಂದು ಎಚ್ಚರಿಸಿದರು.
“ಹಿಂದಿ ಹಂತಹಂತವಾಗಿ ಸಾಮಾನ್ಯ ರಾಷ್ಟ್ರೀಯ ಭಾಷೆಯಾಗಿ ಮುನ್ನಡೆಯಬೇಕು ಹಾಗೂ ಈ ಪ್ರಕ್ರಿಯೆ ಸಹಜವಾಗಿರಬೇಕು. ನೀವು ಒತ್ತಾಯಪೂರ್ವಕವಾಗಿ ಹೇರಿದರೆ, ಅದಕ್ಕೆ ಪ್ರತಿರೋಧ ವ್ಯಕ್ತವಾಗಲಿದೆ. ಹಿಂದಿಯನ್ನು ಸ್ವಾರ್ಥ ಉದ್ದೇಶಗಳಿಗಾಗಿ ವಿರೋಧಿಸುತ್ತಿರುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಹಿಂದಿ ಹೇರಿಕೆ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರೋಧಿಸಿದ್ದ ಹಿನ್ನೆಲೆಯಲ್ಲಿ ಅರೆಸ್ಸೆಸ್ ನ ಹಿರಿಯ ಪದಾಧಿಕಾರಿಯಾಗಿರುವ ಅರುಣ್ ಕುಮಾರ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.