ಹಿಂದೂ ಕುಟುಂಬಗಳು 3 ಮಕ್ಕಳನ್ನು ಹೊಂದಬೇಕು: ವಿಶ್ವ ಹಿಂದೂ ಪರಿಷತ್

Photo: X/@VHPDigital
ಹೊಸದಿಲ್ಲಿ : ಹಿಂದೂ ಸಮಾಜದ ಜನನ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ಸಮುದಾಯದ ಜನಸಂಖ್ಯೆಯಲ್ಲಿನ ಅಸಮತೋಲನ ಎಂದು ವಿಶ್ವ ಹಿಂದೂ ಪರಿಷತ್ ಹೇಳಿಕೊಂಡಿದ್ದು, ಹಿಂದೂ ಸಮಾಜದ ಅಸ್ತಿತ್ವವನ್ನು ರಕ್ಷಿಸುವುದು ಪ್ರಮುಖ ಜವಾಬ್ದಾರಿಯಾಗಿರುವುದರಿಂದ ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಹೇಳಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎರಡು ದಿನಗಳ ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿ ಮಾತನಾಡಿದ ಜುನಾ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ, "ಜನಸಂಖ್ಯೆಯಲ್ಲಿನ ಬದಲಾವಣೆಗಳು ಹಿಂದೂಗಳ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ʼಹಮ್ ದೋ ಹಮಾರೆ ದೋʼ ಕೂಡ ಮರೆಯಾಗಿದೆ. ಈಗ ಕನಿಷ್ಠ ಎರಡರಿಂದ ಮೂರು ಮಕ್ಕಳ ಅಗತ್ಯವಿದೆ" ಎಂದು ಹೇಳಿದ್ದಾರೆ.
ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ವಿಎಚ್ಪಿ ಈಗಾಗಲೇ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಈಗ ನಮಗೆ ಸಂತ ಸಮುದಾಯದ ಅನುಮೋದನೆ ಮತ್ತು ಬೆಂಬಲ ಸಿಕ್ಕಿದೆ. ಎಲ್ಲಾ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಮತ್ತು ಸರ್ಕಾರಿ ನಿಯಂತ್ರಣವನ್ನು ಸ್ಥಾಪಿಸುವ ಕಾನೂನುಗಳನ್ನು ತೆಗೆದುಹಾಕಬೇಕು ಮತ್ತು ದೇವಾಲಯಗಳ ನಿರ್ವಹಣೆಯನ್ನು ಭಕ್ತರಿಗೆ ಹಸ್ತಾಂತರಿಸಬೇಕು ಎಂದು ಹಿಂದೂ ಸಂತರು ನಂಬುತ್ತಾರೆ ಎಂದು ವಿಎಚ್ ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.