ಹಿಂದು ಮಹಾಸಭಾದಿಂದ ಗಾಂಧಿ ಹತ್ಯೆಯ ಸಂಭ್ರಮಾಚರಣೆ, ಗೋಡ್ಸೆಗೆ ಗೌರವಾರ್ಪಣೆ

ಮಹಾತ್ಮಾ ಗಾಂಧಿ, ನಾಥುರಾಮ ಗೋಡ್ಸೆ | PTI
ಮೀರತ್ : ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯ ದಿನವಾದ ಗುರುವಾರ ಗಾಂಧಿ ಹತ್ಯೆಯನ್ನು ಸಂಭ್ರಮಿಸಿರುವ ಅಖಿಲ ಭಾರತ ಹಿಂದು ಮಹಾಸಭಾ,ಅವರ ಹಂತಕ ನಾಥುರಾಮ ಗೋಡ್ಸೆಗೆ ಜೈಕಾರ ಹಾಕಿದೆ.
ಹಿಂದು ಮಹಾಸಭಾದೊಂದಿಗೆ ಗುರುತಿಸಿಕೊಂಡಿದ್ದ ಗೋಡ್ಸೆ 1948ರಂದು ದಿಲ್ಲಿಯ ಬಿರ್ಲಾ ಸದನದಲ್ಲಿ ಪ್ರಾರ್ಥನಾ ಸಭೆಯಲ್ಲಿ ಗಾಂಧಿಯವರನ್ನು ಗುಂಡಿಟ್ಟು ಕೊಂದಿದ್ದ. 1949ರಲ್ಲಿ ಅಂಬಾಲಾ ಜೈಲಿನಲ್ಲಿ ಆತನನ್ನು ಗಲ್ಲಿಗೇರಿಸಲಾಗಿತ್ತು.
‘ಅಮರ ಹುತಾತ್ಮ ನಾಥುರಾಮ ಗೋಡ್ಸೆ ನಾನಾ ಆಪ್ಟೆ ಧಾಮ್’ನಲ್ಲಿ ಸಭೆ ಸೇರಿದ ಹಿಂದು ಮಹಾಸಭಾ ಸದಸ್ಯರು ಗಾಂಧಿ ಹತ್ಯೆಗಾಗಿ ಗೋಡ್ಸೆಯನ್ನು ಹಾಡಿ ಹೊಗಳಿದ್ದಾರೆ.
ಮಹಾಸಭಾದ ನಾಯಕ ಹಾಗೂ ನಾನಾ ಆಪ್ಟೆ ಧಾಮದ ಸ್ಥಾಪಕ ಪಂಡಿತ ಅಶೋಕ ಶರ್ಮಾ ನೇತೃತ್ವದಲ್ಲಿ ಹವನ, ಪೂಜೆ ಮತ್ತು ಹನುಮಾನ ಚಾಲೀಸಾ ಪಠಣ ನಡೆದವು.
ಸಮಾರಂಭವು ‘ಕರಮಚಂದ್ ಗಾಂಧಿಯವರ ಆತ್ಮವನ್ನು ತೆಗೆದುಹಾಕುವ’ ಮತ್ತು ಭಾರತದಿಂದ ‘ಗಾಂಧಿವಾದ’ವನ್ನು ತೊಲಗಿಸುವ ಗುರಿಯನ್ನು ಹೊಂದಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಶರ್ಮಾ,ಮಹಾತ್ಮಾ ಗಾಂಧಿಯವರ ‘ರಾಷ್ಟ್ರಪಿತ’ ಬಿರುದನ್ನು ಹಿಂದೆಗೆದುಕೊಳ್ಳುವಂತೆ ಭಾರತ ಸರಕಾರವನ್ನು ಆಗ್ರಹಿಸಿದರು.
ಗೋಡ್ಸೆ ಮತ್ತು ಗಾಂಧಿ ಹತ್ಯೆಯೊಂದಿಗೆ ಗುರುತಿಸಿಕೊಂಡಿದ್ದ ನಾರಾಯಣ ನಾನಾ ಆಪ್ಟೆ ಅವರ ಕುಟುಂಬಗಳನ್ನು ಸನ್ಮಾನಿಸುವುದಾಗಿಯೂ ಪ್ರಕಟಿಸಿದ ಹಿಂದು ಮಹಾಸಭಾ ಕಾರ್ಯಕ್ರಮದ ಅಂತ್ಯದಲ್ಲಿ ಸದಸ್ಯರಿಗೆ ಸಿಹಿಗಳನ್ನೂ ವಿತರಿಸಿತು.