ರಾಹುಲ್ ಗಾಂಧಿ ವಿರುದ್ಧದ ಬಿಜೆಪಿ ನಾಯಕರ ಹೇಳಿಕೆಗೆ ಬಲಪಂಥೀಯ ಗುಂಪುಗಳಿಂದಲೇ ಆಕ್ಷೇಪ
ಹೊಸದಿಲ್ಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನೀಡಿರುವ ಹೇಳಿಕೆಯ ವಿರುದ್ಧ ಬಲಪಂಥೀಯ ಸಂಘಟನೆಗಳಿಂದಲೇ ಆಕ್ಷೇಪ ವ್ಯಕ್ತವಾಗಿದ್ದು, ಬುಧವಾರ ಹಿಂದೂ ಸೇನೆ(ಎಸ್)ಯ ಅಧ್ಯಕ್ಷ ಸುರ್ಜೀತ್ ಯಾದವ್ ಎಂಬುವವರು ಕೇಂದ್ರ ಸಚಿವರ ವಿರುದ್ಧ ದಿಲ್ಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವರು ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಯಾದವ್ ದೂರು ದಾಖಲಿಸಿದ್ದಾರೆ.
ಬಿಟ್ಟು ನೀಡಿರುವ ಹೇಳಿಕೆಯು ವ್ಯಾಪಕ ಹಿಂಸಾಚಾರ ಹಾಗೂ ಉದ್ವಿಗ್ನತೆಗೆ ಕಾರಣವಾಗಲಿದೆ ಎಂದು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಿರುವ ಯಾದವ್, ಬಿಜೆಪಿ ನಾಯಕರ ಹೇಳಿಕೆಯಿಂದ ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ ಎಂದೂ ಆರೋಪಿಸಿದ್ದಾರೆ.
ಇದಕ್ಕೂ ಮುನ್ನ, ರಾಹುಲ್ ಗಾಂಧಿಯನ್ನು ನಂಬರ್ 1 ಭಯೋತ್ಪಾದಕ ಎಂದು ಟೀಕಿಸಿದ್ದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.