ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ನೀಡಿದ್ದ ಅವಕಾಶ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ
Photo: PTI
ಹೊಸದಿಲ್ಲಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿ ವಾರಣಾಸಿ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಅರ್ಚಕರೊಬ್ಬರು ಪೂಜೆ ಸಲ್ಲಿಸಬಹುದೆಂದು ವಾರಣಾಸಿ ನ್ಯಾಯಾಲಯ ಕಳೆದ ತಿಂಗಳು ತೀರ್ಪು ಪ್ರಕಟಿಸಿತ್ತು. ತನ್ನ ಅಜ್ಜ ಸೋಮನಾಥ್ ವ್ಯಾಸ್ ಇಲ್ಲಿ ಡಿಸೆಂಬರ್ 1993ರ ತನಕ ಪೂಜೆ ಸಲ್ಲಿಸುತ್ತಿದ್ದರು ಎಂದು ಶೈಲೇಂದ್ರ ಕುಮಾರ್ ಪಾಠಕ್ ಎಂಬವರ ಅರ್ಜಿಯನ್ನು ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಲಾಗಿತ್ತು. ಅನುವಂಶಿಕ ಅರ್ಚಕನಾಗಿ ನೆಲಮಾಳಿಗೆ ಪ್ರವೇಶಿಸಿ ಪೂಜೆ ಸಲ್ಲಿಸಲು ಅವರು ಅವಕಾಶ ಕೋರಿದ್ದರು.
ಮಸೀದಿಯಲ್ಲಿ ನಾಲ್ಕು ನೆಲಮಾಳಿಗೆಗಳಿದ್ದು, ಅವುಗಳಲ್ಲಿ ಒಂದು ಇನ್ನೂ ವ್ಯಾಸ್ ಕುಟುಂಬದ ಬಳಿ ಇದೆ.
ಮಸೀದಿ ಸಂಕೀರ್ಣ ಕುರಿತಂತೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿ ಹೊರಬಿದ್ದ ನಂತರ ವಾರಣಾಸಿ ನ್ಯಾಯಾಲಯದ ತೀರ್ಪು ಪ್ರಕಟವಾಗಿತ್ತು. ಈ ಮಸೀದಿಯನ್ನು ಔರಂಗಜೇಬ್ ಆಡಳಿತದ ವೇಳೆ ಹಿಂದು ದೇವಳದ ಅವಶೇಷಗಳ ಮೇಲೆ ನಿರ್ಮಿಸಲಾಗಿತ್ತು ಎಂದು ವರದಿ ಹೇಳಿತ್ತು.
ಆದರೆ ಅರ್ಜಿದಾರರ ವಾದವನ್ನು ಮಸೀದಿ ಸಮಿತಿ ಅಲ್ಲಗಳೆದಿತ್ತು ಹಾಗೂ ನೆಲಮಾಳಿಗೆಯಲ್ಲಿ ಯಾವುದೇ ಮೂರ್ತಿಗಳಿಲ್ಲ, ಆದ್ದರಿಂದ ಅಲ್ಲಿ 1993 ತನಕ ಯಾವುದೇ ಪೂಜೆ ಸಲ್ಲಿಸಿರುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು.
ವಾರಣಾಸಿ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಸಮಿತಿ ಫೆಬ್ರವರಿ 2ರಂದು ಹೈಕೋರ್ಟ್ ಕದ ತಟ್ಟಿತ್ತು.
ಇತ್ತಂಡಗಳ ವಾದವನ್ನು ಆಲಿಸಿ ಫೆಬ್ರವರಿ 15ರಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪು ಕಾದಿರಿಸಿತ್ತು.