ಹಿಂದೂ ಧರ್ಮ ಎಂಬುದು ಮೋಸ; ಸುಪ್ರೀಂ ಕೋರ್ಟ್ ಕೂಡಾ ಇದನ್ನೇ ಹೇಳಿದೆ: ಎಸ್ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ
“ಎಲ್ಲ ಅಸಮಾನತೆಗೆ ಕಾರಣ ಬ್ರಾಹ್ಮಣ್ಯವೇ ಆಗಿದೆ”
ಸ್ವಾಮಿ ಪ್ರಸಾದ್ ಮೌರ್ಯ (Photo credit: indiatoday.in)
ಹೊಸದಿಲ್ಲಿ: “ಹಿಂದೂ ಧರ್ಮ ಎಂಬುದು ಒಂದು ಮೋಸವಾಗಿದೆ. ಹಿಂದುತ್ವ ಧರ್ಮವಲ್ಲ ಬದಲಿಗೆ ವಂಚನೆ ಹಾಗೂ ಕೆಲವರ ಪಾಲಿಗೆ ಜೀವನೋಪಾಯ” ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ ಎಂದು timesofindia.com ವರದಿ ಮಾಡಿದೆ.
ತಮ್ಮ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳಲು ಸ್ವಾಮಿ ಪ್ರಸಾದ್ ಮೌರ್ಯ ಅವರು ಈ ಹಿಂದಿನ ಸುಪ್ರೀಂ ಕೋರ್ಟ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.
“ಹಿಂದೂ ಧರ್ಮ ಎಂಬುದು ಮೋಸವಾಗಿದೆ. 1955ರ ತನ್ನ ತೀರ್ಪಿನಲ್ಲಿ ‘ಹಿಂದೂ ಒಂದು ಧರ್ಮವಲ್ಲ, ಬದಲಿಗೆ ಜೀವನ ವಿಧಾನ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದು 200ಕ್ಕೂ ಹೆಚ್ಚು ಧರ್ಮಗಳ ಕಲೆಬೆರಕೆಯಾಗಿದೆ. ಮೋಹನ್ ಭಾಗವತ್ ಕೂಡಾ ಹಿಂದೂ ಎಂಬುದು ಧರ್ಮವಲ್ಲ ಬದಲಿಗೆ ಜೀವನ ವಿಧಾನ ಎಂದು ಒಂದಲ್ಲ, ಎರಡು ಬಾರಿ ಹೇಳಿದ್ದಾರೆ” ಎಂದು ಸ್ವಾಮಿ ಪ್ರಸಾದ್ ಮೌರ್ಯ ವಾಗ್ದಾಳಿ ನಡೆಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಕೂಡಾ ಹಿಂದೂ ಎಂಬುದು ಧರ್ಮವಲ್ಲ ಎಂದು ಹೇಳಿದ್ದಾರೆ. ಗಡ್ಕರಿ ಕೂಡಾ ಇದೇ ಮಾತನ್ನು ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ” ಎಂದು ಸೋಮವಾರ ಹೊ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಬೌದ್ಧರು ಹಾಗೂ ಬಹುಜನ ಹಕ್ಕುಗಳ ವಿಚಾರಗೋಷ್ಠಿಯಲ್ಲಿ ಮೌರ್ಯ ಪ್ರತಿಪಾದಿಸಿದ್ದಾರೆ.
ನಾನು ಹಿಂದೂ ಧರ್ಮದ ಕುರಿತು ಹೇಳಿದ್ದನ್ನೆ ಬೇರೆಯವರೂ ಹೇಳಿದಾಗ ಯಾಕೆ ಯಾರೊಬ್ಬರ ಭಾವನೆಗೂ ಘಾಸಿಯಾಗುವುದಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊವೊಂದರಲ್ಲಿ, “ಬ್ರಾಹ್ಮಣ್ಯದ ಬೇರುಗಳು ತುಂಬಾ ಆಳವಾಗಿವೆ ಹಾಗೂ ಎಲ್ಲ ಅಸಮಾನತೆಗೆ ಕಾರಣ ಕೂಡಾ ಬ್ರಾಹ್ಮಣ್ಯವೇ ಆಗಿದೆ. ಹಿಂದೂ ಎಂಬ ಯಾವುದೇ ಧರ್ಮವಲ್ಲ. ಅದೆಲ್ಲ ಕೇವಲ ಹುಸಿ. ಈ ಬ್ರಾಹ್ಮಣ ಧರ್ಮವನ್ನೇ ಹಿಂದೂ ಧರ್ಮವೆಂದು ಕರೆಯುವ ಮೂಲಕ ಈ ದೇಶದ ದಲಿತರು, ಬುಡಕಟ್ಟು ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳನ್ನು ಸೆಳೆಯುವ ಪಿತೂರಿ ನಡೆಯುತ್ತಿದೆ” ಎಂದು ಸ್ವಾಮಿ ಪ್ರಸಾದ್ ಮೌರ್ಯ ಹೇಳುತ್ತಿರುವುದನ್ನು ಕೇಳಬಹುದಾಗಿದೆ.