ಹಿಂದು ದೇಗುಲಕ್ಕೆ ಮುಸ್ಲಿಮ್ ಉಸ್ತುವಾರಿ : ಉತ್ತರ ಪ್ರದೇಶದ ಬಹರಾಯಿಚ್ ನಲ್ಲಿ ಸದ್ದಿಲ್ಲದೆ ಮೆರೆಯುತ್ತಿದೆ ಕೋಮು ಸಾಮರಸ್ಯ
ಬಹರಾಯಿಚ್ : ಇತ್ತೀಚಿಗೆ ಕೋಮು ಉದ್ವಿಗ್ನತೆಗಳು ಮತ್ತು ತೋಳಗಳ ದಾಳಿಗಳಿಂದಾಗಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ಸದ್ದಿಲ್ಲದೆ ಮೆರೆಯುತ್ತಿರುವ ಕೋಮು ಸಾಮರಸ್ಯದ ಹೃದಯಸ್ಪರ್ಶಿ ಕಥನವೊಂದು ಹೊರಹೊಮ್ಮಿದೆ.
ಇಸ್ಲಾಮ್ ಧರ್ಮವನ್ನು ಚಾಚೂ ತಪ್ಪದೆ ಪಾಲಿಸುವ ಮುಹಮ್ಮದ್ ಅಲಿ(58) ಹಿಂದು ದೇಗುಲವನ್ನು ನಿರ್ವಹಿಸುತ್ತಿರುವ ಟ್ರಸ್ಟ್ನ ಅಧ್ಯಕ್ಷ ಮತ್ತು ಉಸ್ತುವಾರಿಯಾಗಿ ಕಳೆದ 18 ವರ್ಷಗಳಿಂದಲೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಬಹರಾಯಿಚ್ ಜಿಲ್ಲಾ ಕೇಂದ್ರದಿಂದ 27 ಕಿ.ಮೀ.ಅಂತರದಲ್ಲಿರುವ ಜೈತಾಪುರ ಬಝಾರ್ನಲ್ಲಿ ಅಲಿ ವೃದ್ಧ ಮಾತೇಶ್ವರಿ ಮಾತಾ ಘುರ್ದೇವಿ ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮುಸ್ಲಿಮರೂ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ.
ರೋಝಾ ಮತ್ತು ನಮಾಜ್ನಂತಹ ಇಸ್ಲಾಮಿಕ್ ಸಂಪ್ರದಾಯಗಳನ್ನು ನಿಷ್ಠೆಯಿಂದ ಆಚರಿಸುವ ಅಲಿ ಘುರ್ದೇವಿ ಮತ್ತು ಹನುಮಾನ್ ಅವರ ಆರಾಧನೆಯೊಂದಿಗೆ ತನ್ನ ಅವಳಿ ಪಾತ್ರಗಳನ್ನು ಸಮರ್ಪಣಾ ಭಾವದಿಂದ ನಿರ್ವಹಿಸುತ್ತಿದ್ದಾರೆ.
ತನ್ನ ಬದುಕಿಗೆ ತಿರುವನ್ನು ನೀಡಿದ್ದ ಬಾಲ್ಯದಲ್ಲಿಯ ಘಟನೆಯನ್ನು ನೆನಪಿಸಿಕೊಂಡ ಅಲಿ,‘ನನಗೆ ಏಳು ವರ್ಷ ವಯಸ್ಸಾಗಿದ್ದಾಗ ತೊನ್ನು ನನ್ನನ್ನು ಬಾಧಿಸಿತ್ತು ಮತ್ತು ನನ್ನ ಕಣ್ಣುಗಳು ಬಿಳಿಯಾಗಿದ್ದವು. ಎಲ್ಲ ಚಿಕಿತ್ಸೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ, ನನ್ನ ತಾಯಿ ನನ್ನನ್ನು ಘುರ್ದೇವಿ ದೇವಸ್ಥಾನಕ್ಕೆ ಕರೆದೊಯ್ದಿದ್ದರು,ದೇವಸ್ಥಾನದ ಪವಿತ್ರ ತೀರ್ಥವನ್ನು ಕಣ್ಣಿಗೆ ಹಚ್ಚಿಕೊಂಡಿದ್ದರಿಂದ ನಾನು ಗುಣಮುಖನಾಗಿದೆ ಮತ್ತು ಇದು ದೇವಸ್ಥಾನದೊಂದಿಗೆ ನನ್ನ ಜೀವಿತಾವಧಿಯ ಸಂಬಂಧಕ್ಕೆ ನಾಂದಿ ಹಾಡಿತ್ತು’ ಎಂದು ಹೇಳಿದರು.
2007ರಲ್ಲಿ ದೇವಿ ತನ್ನ ಕನಸಿನಲ್ಲಿ ಬಂದು ದೇಗುಲದಲ್ಲಿ ಸೇವೆ ಸಲ್ಲಿಸುವಂತೆ ಸೂಚಿಸಿದ್ದಳು,ಅಂದಿನಿಂದ ತಾನು ದೇಗುಲದ ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.
ಅಲಿಯವರ ನೇತೃತ್ವದಲ್ಲಿ ದೇವಸ್ಥಾನವು ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಕೊಯ್ಲಿನ ಹಂಗಾಮುಗಳಲ್ಲಿ ಧಾನ್ಯಗಳ ಸಂಗ್ರಹಣೆಯ ಮೂಲಕ ನಿಧಿ ಸಂಚಯದಂತಹ ಹಲವಾರು ಉಪಕ್ರಮಗಳು ದೇವಸ್ಥಾನಕ್ಕೆ ಗಮನಾರ್ಹ ಸಂಪನ್ಮೂಲಗಳಾಗಿವೆ.
ಈ ವರ್ಷವೊಂದರಲ್ಲೇ ನಾವು ದೇವಸ್ಥಾನದ ಅಭಿವೃದ್ಧಿಗೆ 2.7 ಲ.ರೂ.ಸಂಗ್ರಹಿಸಿದ್ದೇವೆ ಎಂದು ಅಲಿ ತಿಳಿಸಿದರು.
ಸಾರ್ವಜನಿಕರ ದೇಣಿಗೆಗಳು ಮತ್ತು ಸರಕಾರದ ಬೆಂಬಲ ಕೂಡ ದೇವಸ್ಥಾನದ ನವೀಕರಣಕ್ಕೆ ನೆರವಾಗಿದ್ದು,30.40 ಲ.ರೂ.ಗಳನ್ನು ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಲಾಗಿದೆ.
ಇತ್ತೀಚಿಗೆ 2.5 ಲ.ರೂ.ವೆಚ್ಚದಲ್ಲಿ ಜೈಪುರದಿಂದ ತರಿಸಲಾದ ಐದೂವರೆ ಅಡಿ ಎತ್ತರದ ಹನುಮಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ‘ನಾನು ಹಿಂದು ಮತ್ತು ಮುಸ್ಲಿಮ್ ಎರಡೂ ಧರ್ಮಗಳನ್ನು ಗೌರವಿಸುತ್ತೇನೆ, ದೇವಸ್ಥಾನಕ್ಕೆ ಸೇವೆ ಸಲ್ಲಿಸುವುದು ನನ್ನ ಭಕ್ತಿ ಮತ್ತು ಕೋಮು ಸೌಹಾರ್ದಕ್ಕೆ ನನ್ನ ಬದ್ಧತೆಯ ಪ್ರತೀಕವಾಗಿದೆ ’ ಎಂದು ಅಲಿ ಹೇಳಿದರು.