ಪಠ್ಯಗಳಲ್ಲಿ ‘ಹಿಂದೂ ಗೆಲುವುಗಳು’, ಶಾಸ್ತ್ರೀಯ ಇತಿಹಾಸ ಅಳವಡಿಕೆ
ಎನ್ಸಿಇಆರ್ಟಿಗೆ ಪಠ್ಯ ಸಮಿತಿಯ ಶಿಫಾರಸು
Photo: ncert.nic.in
ಹೊಸದಿಲ್ಲಿ : ಶಾಲಾ ಪಠ್ಯಪುಸ್ತಕಗಳಲ್ಲಿ ದೇಶದ ಹೆಸರು ಇಂಡಿಯಾದ ಬದಲಿಗೆ ಭಾರತವೆಂದು ಉಲ್ಲೇಖಿಸುವಂತೆ ಎನ್ಸಿಇಆರ್ಟಿಗೆ ಸಮಿತಿಯೊಂದು ಶಿಫಾರಸು ಮಾಡಿತ್ತಾದರೂ ಅದು ಇನ್ನೂ ಸ್ವೀಕರಿಸಿಲ್ಲವೆಂದು ಎನ್ಸಿಇಆರ್ಟಿ ಚೇರ್ಮನ್ ದಿನೇಶ್ ಪ್ರಸಾದ್ ಸಕ್ಲಾನಿ ಗುರುವಾರ ತಿಳಿಸಿದ್ದಾರೆ. ಇದೇ ಸಮಿತಿಯು ಎನ್ಸಿಇಆರ್ಟಿಯ ಹಾಲಿ ಪಠ್ಯಗಳಲ್ಲಿ ಬದಲಾವಣೆ ಕುರಿತಂತೆ ಸಮಿತಿಯು ಎನ್ಸಿಆರ್ಟಿಗೆ ಇನ್ನೂ ಐದು ಶಿಫಾರಸುಗಳನ್ನು ಮಾಡಿದ್ದು, ಅವುಗಳ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲಾಗಿದೆ.
ಪ್ರಾಚೀನ ಇತಿಹಾಸದ ಬದಲಿಗೆ ಶಾಸ್ತ್ರೀಯ ಇತಿಹಾಸವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವುದು. ಆ ಮೂಲಕ ಬ್ರಿಟಿಷರು ಇತಿಹಾಸವನ್ನು ಪ್ರಾಚೀನ, ಮಧ್ಯಯುಗೀನ ಹಾಗೂ ಆಧುನಿಕ ಇತಿಹಾಸವೆಂಬುದಾಗಿ ವಿಭಾಗಿಸುವುದನ್ನು ಕೊನೆಗೊಳಿಸಬೇಕೆಂದು ಸಮಿತಿ ಶಿಫಾರಸು ಮಾಡಿತ್ತು.
ವಿವಿಧ ಯುದ್ಧಗಳಲ್ಲಿ ‘ಹಿಂದೂ’ಗಳು ಸಾಧಿಸಿದ ಗೆಲುವುಗಳ ಬಗ್ಗೆ ಬೆಳಕುಚೆಲ್ಲುವಂತೆಯೂ ಸಮಿತಿಯು ಶಿಫಾರಸು ಮಾಡಿತ್ತು. ‘‘ಪ್ರಸಕ್ತ ಪಠ್ಯಪುಸ್ತಕಗಳಲ್ಲಿ ನಮ್ಮ ವೈಫಲ್ಯಗಳನ್ನಷ್ಟೇ ಉಲ್ಲೇಖಿಸಲಾಗಿದೆ. ಆದರೆ ಮೊಗಲರು ಹಾಗೂ ಸುಲ್ತಾನರುಗಳ ವಿರುದ್ಧ ನಾವು ಸಾಧಿಸಿದ ಗೆಲುವುಗಳನ್ನು ಪ್ರಸ್ತುತ ಪಡಿಸಿಲ್ಲ’’ ಎಂದು ಇಸಾಕ್ ಹೇಳಿದ್ದಾರೆ.
ಎಲ್ಲಾ ಪಠ್ಯ ವಿಷಯಗಳಲ್ಲಿಯೂ ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್)ವನ್ನು ಪರಿಚಯಿಸುವಂತೆಯೂ ಇಸಾಕ್ ನೇತೃತ್ವದ ಸಮಿತಿಯು ಶಿಫಾರಸು ಮಾಡಿತ್ತು.
ಚಂದ್ರಯಾನ 3 ಸೇರಿದಂತೆ ವಿಜ್ಞಾನ,ತಂತ್ರಜ್ಞಾನ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಿಷಯಗಳಲ್ಲಿ ಭಾರತದ ಸಾಧನೆಯನ್ನು ವಿವರಿಸುವ ಪಠ್ಯವಿಷಯಗಳನ್ನು ಸೇರ್ಪಡೆಗೊಳಿಸುವುದು,ನಾರಿಶಕ್ತಿ ವಂದನ್ (ಮಹಿಳಾ ಸಬಲೀಕರಣ ಯೋಜನೆ), ಕೋವಿಡ್ ನಿರ್ವಹಣೆ ಹಾಗೂ ಸುಸ್ಥಿರತೆ ಕುರಿತ ಪಠ್ಯಗಳ ಸೇರ್ಪಡೆಗೂ ಸಮಿತಿ ಶಿಫಾರಸು ಮಾಡಿತ್ತು.