ರಕ್ತವರ್ಗಾವಣೆ ಸಂದರ್ಭ HIV ಸೋಂಕು; ನಿವೃತ್ತ ಯೋಧನಿಗೆ 1.54 ಕೋಟಿ ರೂ. ಪರಿಹಾರ ನೀಡಲು ಭೂಸೇನೆ-ವಾಯುಪಡೆಗೆ ಸುಪ್ರೀಂಕೋರ್ಟ್ ಆದೇಶ
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಕರ್ತವ್ಯದಲ್ಲಿದ್ದಾಗ ರಕ್ತವರ್ಗಾವಣೆಯ ಮೂಲಕ ಎಚ್ಐವಿ ಸೋಂಕಿಗೊಳಗಾದ ವಾಯುಪಡೆಯ ನಿವೃತ್ತ ಯೋಧನಿಗೆ 1.54 ಕೋಟಿ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಭಾರತೀಯ ಭೂಸೇನೆ ಹಾಗೂ ವಾಯುಪಡೆಗೆ ನಿರ್ದೇಶನ ನೀಡಿದೆ.
ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಯೋಧ, 2002ರಲ್ಲಿ ಅಸ್ವಸ್ಥಗೊಂಡಿದ್ದನು. ಆಗ ಅವರನ್ನು ಭೂ ಸೇನೆಯ ಫೀಲ್ಡ್ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಂದರ್ಭ ಒಂದು ಯೂನಿಟ್ ರಕ್ತವನ್ನು ಅವರ ದೇಹಕ್ಕೆ ವರ್ಗಾವಣೆಗೊಳಿಸಲಾಗಿತ್ತು. 2014ರಲ್ಲಿ ಅಸ್ವಸ್ಥಗೊಂಡಾಗ, ಅವರಿಗೆ ಎಚ್ಐವಿ ಸೋಂಕು ತಗಲಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು.
ಮಾಜಿ ಯೋಧನಿಗೆ ಎಚ್ಐವಿ ಸೋಂಕು ತಗಲಿರುವುದಕ್ಕೆ ವಾಯುಪಡೆ ಹಾಗೂ ಭೂಸೇನೆಯ ವೈದ್ಯಕೀಯ ನಿರ್ಲಕ್ಷ್ಯ ಕಾರಣವೆಂದು ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಹಾಗೂ ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ತನಗೆ ಎಚ್ಐವಿ ತಗಲಿರುವುದು ದೃಢಪಟ್ಟ ಬಳಿಕ ತನಗೆ ಚಿಕಿತ್ಸೆ ನೀಡಲು ಸೇನೆಯ ಆಸ್ಪತ್ರೆಗಳು ನಿರಾಕರಿಸಿರುವುದಾಗಿ ನಿವೃತ್ತ ಯೋಧ ಆಪಾದಿಸಿದ್ದರು. 2002ರಲ್ಲಿ ರಕ್ತವರ್ಗಾವಣೆಯಿಂದಾಗಿಯೇ ಯೋಧನಿಗೆ ಎಚ್ಐವಿ ತಗಲಿರುವುದನ್ನು ನ್ಯಾಯಾಲಯವು ನೇಮಿಸಿದ್ದ ವೈದ್ಯಕೀಯ ತಜ್ಞರ ಮಂಡಳಿ ತೀರ್ಮಾನಿಸಿತ್ತು.