ಸೆಂಟರ್ ಫಾರ್ ಪಾಲಿಸಿ ರಿಸರ್ಚ್ನ ಎಫ್ಸಿಆರ್ಎ ನೋಂದಣಿ ರದ್ದುಗೊಳಿಸಿದ ಕೇಂದ್ರ
Photo: Instagram/cpr_india
ಹೊಸದಿಲ್ಲಿ: ರಾಜಧಾನಿಯಲ್ಲಿರುವ ಪ್ರಮುಖ ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆಯಾಗಿರುವ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಇದರ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯಿದೆ 2020 ಅನ್ವಯದ ಎಫ್ಸಿಆರ್ಎ ನೋಂದಣಿಯನ್ನು ಇಂದು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.
ಈ ಸಂಸ್ಥೆಯ ನೇತೃತ್ವವನ್ನು ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರ ಪುತ್ರಿ ಯಾಮಿನಿ ಅಯ್ಯರ್ ವಹಿಸಿದ್ದಾರೆ.
ಈ ಸಂಸ್ಥೆ ಎಫ್ಸಿಆರ್ಎ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ನೋಂದಣಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 2022 ರಲ್ಲಿ ಆದಾಯ ತೆರಿಗೆ ಇಲಾಖೆಯು ಸಿಪಿಆರ್ ಸಹಿತ ಆಕ್ಸ್ಫಾಮ್ ಇಂಡಿಯಾ ಮತ್ತು ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ಕಚೇರಿಗಳಲ್ಲಿ “ಸಮೀಕ್ಷೆ” ಕಾರ್ಯಾಚರಣೆ ನಡೆಸಿತ್ತು.
ಕಳೆದ ವರ್ಷ ಕೇಂದ್ರ ಸರ್ಕಾರವು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ನ ಎಫ್ಸಿಆರ್ಎ ನೋಂದಣಿಯನ್ನು 180 ದಿನಗಳ ಕಾಲ ರದ್ದುಗೊಳಿಸಿ ನಂತರ ಅದನ್ನು ಇನ್ನೂ 180 ದಿನಗಳ ಕಾಲ ವಿಸ್ತರಿಸಿತ್ತು. ಈ ಸಂಸ್ಥೆಯು 1973ರಿಂದ ಕಾರ್ಯಾಚರಿಸುತ್ತಿದೆ.