ಮಧ್ಯಪ್ರದೇಶ: ಧಾರ್ಮಿಕ ಮೆರವಣಿಗೆ ವೇಳೆ ನೀರು ಉಗುಳಿದ್ದಾರೆಂದು ಆರೋಪಿಸಿ ಮೂವರು ಮುಸ್ಲಿಮರ ಮನೆಗಳನ್ನು ಭಾಗಶಃ ನೆಲಸಮಗೊಳಿಸಿದ ಜಿಲ್ಲಾಡಳಿತ
Screengrab: Twitter/@HindutvaWatchIn
ಉಜ್ಜಯಿನಿ (ಮಧ್ಯಪ್ರದೇಶ): ಧಾರ್ಮಿಕ ಮೆರವಣಿಗೆಯೊಂದರ ಮೇಲೆ ನೀರು ಉಗುಳಿದ್ದಾರೆ ಎಂದು ಆರೋಪಿಸಿ, ಮೂವರು ಮುಸ್ಲಿಮರಿಗೆ ಸೇರಿರುವ ಮನೆಗಳಿಗೆ ಹೊಂದಿಕೊಂಡಿರುವ 'ಅನಧಿಕೃತ' ನಿರ್ಮಾಣವನ್ನು ಉಜ್ಜಯಿನಿ ಜಿಲ್ಲಾಡಳಿತವು ನೆಲಸಮಗೊಳಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮನೆಗಳನ್ನು ನೆಲಸಮಗೊಳಿಸುವಾಗ ಸ್ಥಳದ ಬಳಿಗೆ ವಾದ್ಯಗಾರರನ್ನೂ ಪ್ರಾಧಿಕಾರಗಳು ಕರೆಸಿದ್ದವು ಎಂದು ಹೇಳಲಾಗಿದೆ.
ಬಾಬಾ ಮಹಾಕಾಳ್ ಸಾವರಿ ಎಂದು ಕರೆಯಲಾಗುವ ಹಿಂದೂ ಧಾರ್ಮಿಕ ಮೆರವಣಿಗೆ ಸಾಗುತ್ತಿರುವಾಗ ಅದರ ಮೇಲೆ ಆರೋಪಿಗಳು ನೀರು ಉಗುಳಿರದ್ದಾರೆನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತಂದ ಆರೋಪದ ಮೇಲೆ ಮೂವರು ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪೈಕಿ ಇಬ್ಬರು ಆರೋಪಿಗಳು ಇನ್ನೂ ಅಪ್ರಾಪ್ತರಾಗಿದ್ದು, ಅವರನ್ನು ಬಾಲಾಪರಾಧ ಕಾರಾಗೃಹಕ್ಕೆ ಕಳಿಸಲಾಗಿದ್ದರೆ, ಮೂರನೆಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ಭೂರಿಯ, ಆರೋಪಿಗಳ ಕುರಿತು ಸ್ಥಳೀಯ ಸಂಸ್ಥೆ ಹಾಗೂ ಕಂದಾಯ ಇಲಾಖೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದರ ನಂತರ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಥಳಕ್ಕೆ ವಾದ್ಯಗಾರರನ್ನು ಕರೆಸಿರುವ ಕುರಿತು ಪ್ರಶ್ನಿಸಿದಾಗ, "ವಾದ್ಯಗಾರರನ್ನು ಕರೆಸಿ, ಕಾನೂನುಬಾಹಿರ ನಿರ್ಮಾಣವನ್ನು ತೆರವುಗೊಳಿಸಲಾಗಿದೆ ಎಂದು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂಬ ನಿಯಮವಿದೆ. ನಾವು ಆ ನಿಯಮಗಳನ್ನು ಪಾಲಿಸಿದ್ದೇವೆ" ಎಂದು ಭೂರಿಯ ಸ್ಪಷ್ಟಪಡಿಸಿದ್ದಾರೆ.
ಆದರೆ, ಅಪರಾಧ ಕೃತ್ಯದ ಆರೋಪಿಗಳಾಗಿರುವವರ ಮನೆಗಳನ್ನು ನೆಲಸಮಗೊಳಿಸುವ ಯಾವುದೇ ಅವಕಾಶವೂ ಭಾರತೀಯ ಕಾನೂನಿನಲ್ಲಿಲ್ಲ. ಹೀಗಿದ್ದೂ, ಭಾರತೀಯ ಜನತಾ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಈ ಅಭ್ಯಾಸವನ್ನು ನಿಯಮಿತವಾಗಿ ಕಾಣಬಹುದಾಗಿದೆ.