ಮಾನಹಾನಿಕರ ಪೋಸ್ಟ್: 20 ಮಂದಿ ಯೂಟ್ಯೂಬರ್ ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಟಿ ಹನಿ ರೋಸ್
ನಟಿ ಹನಿ ರೋಸ್ (Photo: instagram)
ಕೊಚ್ಚಿ: ತಮ್ಮ ವಿರುದ್ಧದ ಆನ್ ಲೈನ್ ದಾಳಿಯ ವಿರುದ್ಧ ಕ್ರಮ ತೆಗೆದುಕೊಂಡಿರುವ ನಟಿ ಹನಿ ರೋಸ್, ತಮ್ಮ ಭಾವಚಿತ್ರವನ್ನು ಬಳಸಿಕೊಂಡು, ಮಾನಹಾನಿಕರ ತುಣುಕುಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ 20 ಮಂದಿ ಯೂಟ್ಯೂಬರ್ ಗಳ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ. ಈ ಯೂಟ್ಯೂಬರ್ ಗಳು ಅಸಮರ್ಪಕ ʼತಂಬ್ ನೈಲ್ʼ ಹಾಗೂ ದಾರಿ ತಪ್ಪಿಸುವ ಶೀರ್ಷಿಕೆಗಳನ್ನು ಬಳಸಿಕೊಂಡು ನನ್ನ ಖ್ಯಾತಿಗೆ ಧಕ್ಕೆ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಯೂಟ್ಯೂಬರ್ ಗಳ ಹೆಸರುಗಳನ್ನು ಪೊಲೀಸರಿಗೆ ಹಸ್ತಾಂತರಿಸಿರುವ ಹನಿ ರೋಸ್, ಅವರೆಲ್ಲರ ವಿರುದ್ಧ ಕಾನೂನು ಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಈ ನಡುವೆ, ಲೈಂಗಿಕ ಕಿರುಕುಳ ಆರೋಪದ ಮೇಲೆ ಬಂಧಿತರಾಗಿರುವ ಬಾಬಿ ಚೆಮ್ಮನೂರ್ ವಿಚಾರಣೆ ಪ್ರಗತಿಯಲ್ಲಿದೆ. ಅವರನ್ನು ಬುಧವಾರ ವಯನಾಡ್ ನ ಮೆಪ್ಪಾಡಿಯಲ್ಲಿರುವ ಬೋಚ್ ಥೌಸಂಡ್ ಎಕರೆ ರೆಸಾರ್ಟ್ ನಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಿಗೇ, ವಿಚಾರಣೆಗಾಗಿ ಅವರನ್ನು ಎರ್ನಾಕುಲಂ ಕೇಂದ್ರ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಅವರ ಮೊಬೈಲ್ ಫೋನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಎರ್ನಾಕುಲಂ ಪ್ರಥಮ ದರ್ಜೆಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹನಿ ರೋಸ್ ನೀಡಿರುವ ಗೋಪ್ಯ ಹೇಳಿಕೆಯನ್ನು ತನಿಖಾ ತಂಡವು ವಿಶ್ಲೇಷಣೆ ನಡೆಸುತ್ತಿದೆ. ಈ ಹೇಳಿಕೆಯು ಬಾಬಿ ಚೆಮ್ಮನೂರ್ ವಿರುದ್ಧ ಮತ್ತಷ್ಟು ದೋಷಾರೋಪಗಳಿಗೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗಿದೆ.