ಅರುಣಾಚಲದ ಮೇಲೆ ಚೀನಾ ಹಕ್ಕು ಪ್ರತಿಪಾದನೆಯನ್ನು ಮೋದಿ ಸರಕಾರ ಬಲವಾಗಿ ಖಂಡಿಸುತ್ತದೆ ಎಂದು ಆಶಿಸಿದ್ದೇವೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo: PTI
ಹೊಸದಿಲ್ಲಿ: ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಮಂಗಳವಾರ ಪ್ರತಿಪಾದಿಸಿದ ಕಾಂಗ್ರೆಸ್, ರಾಜ್ಯದ ಮೇಲೆ ಹಕ್ಕು ಸಾಧಿಸಿ ಚೀನಿಯರ ‘ದಯನೀಯ’ ಪ್ರತಿಪಾದನೆಯನ್ನು ಬಲವಾಗಿ ಖಂಡಿಸುವಂತೆ ಮೋದಿ ಸರಕಾರಕ್ಕೆ ಕರೆ ನೀಡಿದೆ. ‘ನಮ್ಮ ಗಡಿಗಳಲ್ಲಿ ನಾವು ಶಾಂತಿ ಮತ್ತು ನೆಮ್ಮದಿಯನ್ನು ಬಯಸಿದ್ದೇವೆ ’ ಎಂದು ಅದು ಹೇಳಿದೆ.
ಭಾರತ ಸರಕಾರವು ಚೀನಾದ ಹೇಳಿಕೆಯನ್ನು ‘ಅಸಂಗತ’ ಮತ್ತು ‘ಹಾಸ್ಯಾಸ್ಪದ ’ ಎಂದು ತಳ್ಳಿ ಹಾಕಿದ್ದರೂ ಅರುಣಾಚಲ ಪ್ರದೇಶವು ಯಾವಾಗಲೂ ತನ್ನ ಭೂಪ್ರದೇಶವಾಗಿದೆ ಎಂದು ಹೇಳಿಕೊಳ್ಳುವುದನ್ನು ಅದು ಸೋಮವಾರವೂ ಮುಂದುವರಿಸಿತ್ತು.
ಚೀನಾದ ಪುನರಾವರ್ತಿತ ಹಕ್ಕು ಪ್ರತಿಪಾದನೆಯನ್ನು ’ಹಾಸ್ಯಾಸ್ಪದ ’ಎಂದು ತಳ್ಳಿಹಾಕಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಶನಿವಾರದ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಅವರು ಅರುಣಾಚಲ ಪ್ರದೇಶದ ಮೇಲಿನ ತನ್ನ ದೇಶದ ಹಕ್ಕು ಪ್ರತಿಪಾದನೆಯನ್ನು ಪುನರುಚ್ಚರಿಸಿದ್ದರು.
ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅರುಣಾಚಲ ಪ್ರದೇಶದ ಮೇಲೆ ಚೀನಿ ಹಕ್ಕುಗಳ ಯಾವುದೇ ಪರಿಕಲ್ಪನೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ. ಇದು ಉನ್ನತ ಹುದ್ದೆಗಳಲ್ಲಿರುವ ಚೀನಿಯರು ಈ ತಿಂಗಳಲ್ಲಿ ನಾಲ್ಕನೇ ಸಲ ಮಾಡಿರುವ ಸಂಪೂರ್ಣವಾಗಿ ಹಾಸ್ಯಾಸ್ಪದ ಪ್ರತಿಪಾದನೆಯಾಗಿದೆ ಎಂದು ತಿಳಿಸಿದ್ದಾರೆ.
ಬೇರೆ ದೇಶಗಳಿಗೆ ಸೇರಿದ ಸ್ಥಳಗಳನ್ನು ಮರುನಾಮಕರಣ ಮಾಡುವ ಮತ್ತು ಭೂಪ್ರದೇಶಗಳ ನಕ್ಷೆಗಳನ್ನು ಮರುರೂಪಿಸುವ ಮೂಲಕ ಅಸಂಬದ್ಧ ಹಕ್ಕುಗಳನ್ನು ಮಂಡಿಸುವಲ್ಲಿ ಚೀನಾದ ದಾಖಲೆಯು ಎಲ್ಲರಿಗೂ ತಿಳಿದಿದೆ ಎಂದು ಹೇಳಿರುವ ಖರ್ಗೆ,‘ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವಲ್ಲಿ ನಾವು ಪಕ್ಷ ರಾಜಕಾರಣವನ್ನು ಮೀರಿ ಒಂದಾಗಿದ್ದೇವೆ. ಆದಾಗ್ಯೂಪ್ರಧಾನಿ ನರೇಂದ್ರ ಮೋದಿಯವರ ‘ಲಾಲ್ ಆಂಖ್ (ಕೆಂಗಣ್ಣು)’ ಕಾರ್ಯ ನಿರ್ವಹಿಸದಿರುವುದು ಮತ್ತು 20 ಭಾರತೀಯ ವೀರಯೋಧರು ದೇಶಕ್ಕಾಗಿ ಬಲಿದಾನವನ್ನು ನೀಡಿದ್ದ 2020,ಜೂ.19ರ ಗಾಲ್ವಾನ್ ಘರ್ಷಣೆಗೆ ಸಂಬಂಧಿಸಿದಂತೆ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದು ಅದರ ಆಕ್ರಮಣಶೀಲತೆಗೆ ಕಾರಣವಾಗಿದೆ ಎಂದೂ ಒತ್ತಿ ಹೇಳಬಹುದು’ಎಂದು ಆರೋಪಿಸಿದ್ದಾರೆ.
‘ಅರುಣಾಚಲ ಪ್ರದೇಶ ಗಡಿಗೆ ಸಮೀಪ ಗ್ರಾಮಗಳ ನಿರ್ಮಾಣವಾಗಿರಲಿ ಅಥವಾ ಅದು ಗಡಿಗಳ ಸಮೀಪ ವಾಸವಿರುವ ನಮ್ಮ ಜನರ ಅಪಹರಣವಾಗಿರಲಿ,ಮೋದಿ ಸರಕಾರದ ‘ಚೀನಾವನ್ನು ಸಂತುಷ್ಟಗೊಳಿಸಿ’ ನೀತಿಯು ಅರುಣಾಚಲದಲ್ಲಿ ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಿದೆ’ ಎಂದು ಹೇಳಿರುವ ಖರ್ಗೆ,ಲಡಾಖ್ ಜೊತೆಗೆ ಅರುಣಾಚಲ ಪ್ರದೇಶದಲ್ಲಿಯೂ ‘ಮೋದಿ ಕಿ ಚೈನೀಸ್ ಗ್ಯಾರಂಟಿ’ಯನ್ನು ಆಡಲಾಗುತ್ತಿದೆ ಎಂದು ಆರೋಪಿಸಿದರು.