ಚುನಾವಣೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ : ಉಮರ್ ಅಬ್ದುಲ್ಲಾ ಆಗ್ರಹ
ಉಮರ್ ಅಬ್ದುಲ್ಲಾ | PTI
ಶ್ರೀನಗರ: ಭಯೋತ್ಪಾದನೆ ನಿಗ್ರಹ ಸೇರಿದಂತೆ ಎಲ್ಲ ವಿಷಯಗಳಲ್ಲೂ ಕೇಂದ್ರಾಡಳಿತ ಪ್ರದೇಶ ಆಡಳಿತ ವಿಫಲವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ವಿಧಾನಸಭಾ ಚುನಾವಣೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪನೆ ಮಾಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಉಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರಾಡಳಿತ ಪ್ರದೇಶ ವಿಫಲವಾಗಿರುವುದರಿಂದ ವಿಧಾನಸಭಾ ಚುನಾವಣೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪನೆ ಮಾಡಬೇಕು ಎಂದು ನಾವು ಬಯಸುತ್ತೇವೆ. ಕೇಂದ್ರಾಡಳಿತವು ಜಮ್ಮುವಿನಲ್ಲಿ ವಿಫಲಗೊಂಡಿದೆ, ಭಯೋತ್ಪಾದನೆ ನಿಗ್ರಹದಲ್ಲಿ ವಿಫಲಗೊಂಡಿದೆ ಹಾಗೂ ಅಭಿವೃದ್ಧಿಯಲ್ಲೂ ವಿಫಲಗೊಂಡಿದೆ. ಅದು ಎಲ್ಲ ರಂಗಗಳಲ್ಲೂ ವಿಫಲಗೊಂಡಿದೆ" ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಲೆಫ್ಟಿನೆಂಟ್ ಗವರ್ನರ್ಗೆ ಹಲವಾರು ಅಧಿಕಾರಗಳನ್ನು ನೀಡಿ ಹೊರಡಿಸಲಾಗಿರುವ ಅಧಿಸೂಚನೆಯ ಕುರಿತು ಪ್ರತಿಕ್ರಿಯಿಸಿದ ಅವರು, "ಕೇಂದ್ರಾಡಳಿತ ಪ್ರದೇಶವಾಗುವುದರಲ್ಲಿ ಈ ಅಪಾಯಗಳಿವೆ. ಜನರ ಬಳಿ ಅಧಿಕಾರವಿರುವುದಿಲ್ಲ. ಆದರೆ, ಪ್ರಧಾನಿ ಮತ್ತು ಗೃಹ ಸಚಿವರು ವಿಧಾನಸಭಾ ಚುನಾವಣೆಯ ನಂತರ ರಾಜ್ಯದ ಸ್ಥಾನಮಾನ ಮರುಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿರುವುದರಿಂದ ಇದರ ಅವಧಿ ಕಡಿಮೆಯಾಗಿರಲಿದೆ" ಎಂದು ಹೇಳಿದ್ದಾರೆ.