ತೆಲಂಗಾಣದಲ್ಲಿ ಉಷ್ಣ ಮಾರುತ ಬಿಸಿರಾತ್ರಿಗಳ ಸಾಧ್ಯತೆ : ಐಎಂಡಿ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಬೇಸಿಗೆ ಕಾಲದ ಮಧ್ಯದಲ್ಲಿ ಹೆಚ್ಚುತ್ತಿರುವ ತಾಪಮಾನಗಳಿಂದಾಗಿ ತೆಲಂಗಾಣದಲ್ಲಿ ಹಗಲುಗಳು ಮಾತ್ರವಲ್ಲ, ರಾತ್ರಿಗಳೂ ಬಿಸಿಯಿಂದ ಕೂಡಿವೆ. ತಾಪಮಾನ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು ,ಜನರನ್ನು ಕಂಗೆಡಿಸಿದೆ.
ತಾಪಮಾನಗಳಲ್ಲಿ ಅಸಾಮಾನ್ಯ ಏರಿಕೆಯಾಗಲಿದ್ದು,ಎ.1ರಿಂದ 3ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಉಷ್ಣ ಮಾರುತ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆ ಹೊರಡಿಸಿದೆ. ರಾಜ್ಯದಲ್ಲಿ ಒಣ ಹವೆ ಇರಲಿದ್ದು,ಹೆಚ್ಚಿನ ಜಿಲ್ಲೆಗಳಲ್ಲಿ ರಾತ್ರಿಗಳು ಬಿಸಿಯಿಂದ ಕೂಡಿರುವ ಸಾಧ್ಯತೆಯಿದೆ ಎಂದು ತಿಳಿಸಿರುವ ಅದು,ಸುಮಾರು 44 ಡಿ.ಸೆ-45 ಡಿ.ಸೆ. ಗರಿಷ್ಠ ತಾಪಮಾನವು ಮುಂದುವರಿಯಲಿದ್ದು,ಎಲ್ಲೋ ಮತ್ತು ಆರೆಂಜ್ ಅಲರ್ಟ್ಗಳು ಮುಂದಿನ ಐದು ದಿನಗಳ ಕಾಲ ಜಾರಿಯಲ್ಲಿರುತ್ತವೆ ಎಂದು ಹೇಳಿದೆ.
ಶನಿವಾರ ರಾಜ್ಯದ ಎಲ್ಲ 33 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 40 ಡಿ.ಸೆ.ಅನ್ನು ದಾಟಿದ್ದು, ನಲ್ಗೊಂಡಾದಲ್ಲಿ ಅತ್ಯಂತ ಗರಿಷ್ಠ ತಾಪಮಾನ 43.10 ಡಿ.ಸೆ.ದಾಖಲಾಗಿತ್ತು. ಸೂರ್ಯಪೇಟ್ ಮತ್ತು ಭದ್ರಾದ್ರಿಗಳಲ್ಲಿ ಗರಿಷ್ಠ ತಾಪಮಾನ 43 ಡಿ.ಸೆ.ತಲುಪಿತ್ತು ಎಂದು ತೆಲಂಗಾಣ ರಾಜ್ಯ ಅಭಿವೃದ್ಧಿ ಮತ್ತು ಯೋಜನಾ ಸೊಸೈಟಿ ವರದಿಯು ತಿಳಿಸಿದೆ.