ಕಾರ್ಯಾಂಗದ ನೇಮಕಾತಿಗಳಲ್ಲಿ ಸಿಜೆಐ ಹೇಗೆ ಭಾಗಿಯಾಗುತ್ತಾರೆ?: ಉಪರಾಷ್ಟ್ರಪತಿ ಜಗದೀಪ್ ಧನಕರ್ ಪ್ರಶ್ನೆ

Photo credit:X/@VPIndia
ಭೋಪಾಲ್: ಶಾಸನಬದ್ಧ ಸೂಚನೆಯಿದ್ದರೂ ಭಾರತದ ಮುಖ್ಯ ನ್ಯಾಯಾಧೀಶರು ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಹೇಗೆ ಭಾಗವಹಿಸುತ್ತಾರೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಭೋಪಾಲ್ ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂತಹ ಕಾರ್ಯವಿಧಾನವು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ. ಇದು ಮಾನದಂಡಗಳನ್ನು ಮರುಪರಿಶೀಲಿಸುವ ಸಮಯ ಎಂದು ಹೇಳಿದರು.
" ನಮ್ಮಂತಹ ದೇಶದಲ್ಲಿ ಅಥವಾ ಯಾವುದೇ ಪ್ರಜಾಪ್ರಭುತ್ವದಲ್ಲಿ, ಶಾಸನಬದ್ಧ ಸೂಚನೆಯ ಪ್ರಕಾರ, ಭಾರತದ ಮುಖ್ಯ ನ್ಯಾಯಾಧೀಶರು ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಹೇಗೆ ಭಾಗವಹಿಸಬಹುದು?", ಎಂದು ಧನ್ ಕರ್ ಪ್ರಶ್ನಿಸಿದರು.
"ಕಾನೂನಿನಡಿ ಇದಕ್ಕೆ ಯಾವುದೇ ತಾರ್ಕಿಕತೆ ಇರಬಹುದೇ? ಇದನ್ನು ಪುನರ್ವಿಮರ್ಶೆ ಮಾಡುವ ಸಮಯ ಬಂದಿದೆ. ಇದು ಖಂಡಿತವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿ ಹೊಂದುವುದಿಲ್ಲ. ಕಾರ್ಯಾಂಗದ ಯಾವುದೇ ನೇಮಕಾತಿಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶರನ್ನು ನಾವು ಹೇಗೆ ತೊಡಗಿಸಿಕೊಳ್ಳುವುದು?", ಎಂದು ಅವರು ಅಭಿಪ್ರಾಯಪಟ್ಟರು.