1991ರ ಕೇಂದ್ರದ ಐತಿಹಾಸಿಕ ಬಜೆಟ್ ಅನ್ನು ಮನಮೋಹನ್ ಸಿಂಗ್ ಹೇಗೆ ಸಮರ್ಥಿಸಿಕೊಂಡರು?
ಭಾರತದ ಆರ್ಥಿಕ ಪಥದ ದಿಕ್ಕನ್ನೇ ಬದಲಿಸಿದ್ದ ಆಯವ್ಯಯ!
ಮನಮೋಹನ್ ಸಿಂಗ್ (Photo: PTI)
ಹೊಸದಿಲ್ಲಿ: ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್, 1991 ರಲ್ಲಿ ತಾವು ಮಂಡಿಸಿದ್ದ ಐತಿಹಾಸಿಕ ಕೇಂದ್ರ ಬಜೆಟ್ ಅಂಗೀಕಾರವಾಗುವ ಮುನ್ನ ವ್ಯಾಪಕ ಟೀಕೆಗಳನ್ನು ಎದುರಿಸಿದ್ದರು. ಆದರೆ ಅವರ ದೂರದರ್ಶಿತ್ವದಿಂದ ದೇಶವು ತನ್ನ ಕರಾಳ ಆರ್ಥಿಕ ಬಿಕ್ಕಟ್ಟಿನಿಂದ ಎದ್ದು ನಿಂತಿತು.
ತಮ್ಮ ವ್ಯಾಪಕವಾದ ಸುಧಾರಣೆಗಳಿಗೆ, ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ಮತ್ತು ಸಂಸದೀಯ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಾಯಕರಿಂದ ಟೀಕೆಗಳು ಬಂದಾಗ ಪಿ ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ನೂತನವಾಗಿ ನೇಮಕಗೊಂಡ ವಿತ್ತ ಸಚಿವ ಡಾ. ಮನಮೋಹನ್ ಸಿಂಗ್ ಅವರು ಅದನ್ನು ಅತ್ಯಂತ ಚುರುಕಿನಿಂದ ನಿಭಾಯಿಸಿದರು.
1991 ರಲ್ಲಿ ಮನಮೋಹನ್ ಸಿಂಗ್ ಅವರ ಐತಿಹಾಸಿಕ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ರಕ್ಷಿಸಿತು. ಭಾರತದ ಆರ್ಥಿಕ ಪಥವನ್ನು ಏರುತ್ತಿರುವ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸಿತು.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ನರಸಿಂಹ ರಾವ್ ಜೂನ್ 1991 ರಲ್ಲಿ ಪ್ರಧಾನಿಯಾದ ನಂತರ ನಡೆದ ವೇಗದ ಆರ್ಥಿಕ ಬದಲಾವಣೆಗಳನ್ನು ವಿವರಿಸುವ 'ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ' ಪುಸ್ತಕದಲ್ಲಿ ಈ ಕುರಿತು ವಿವರಿಸಿದ್ದಾರೆ.
"ಜುಲೈ 25, 1991 ರಂದು ಕೇಂದ್ರ ಬಜೆಟ್ ಮಂಡನೆಯಾದ ಒಂದು ದಿನದ ನಂತರ ಡಾ. ಮನಮೋಹನ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡರು. ತಾವು ಮಂಡಿಸಿದ ಬಜೆಟ್ನ ಮೌಲ್ಯಗಳನ್ನು ಆರ್ಥಿಕತೆಯ ಬಗ್ಗೆ ಉತ್ಸಾಹವಿಲ್ಲದ ಅಧಿಕಾರಿಗಳು ವಿರೂಪಗೊಳಿಸದಿರಲಿ ಎಂಬ ಕಾಳಜಿ ಅವರಲ್ಲಿ ಎದ್ದು ಕಾಣುತ್ತಿತ್ತು. ಮನಮೋಹನ್ ಅವರು ತಮ್ಮ ಬಜೆಟ್ ಅನ್ನು ವಿವರಿಸಿದರು. ಅವರು ತಮ್ಮ ಬಜೆಟ್ ಅನ್ನು 'ಮಾನವೀಯ ಮುಖವುಳ್ಳ ಬಜೆಟ್' ಎಂದು ಕರೆದರು. ರಸಗೊಬ್ಬರ, ಪೆಟ್ರೋಲ್ ಮತ್ತು ಎಲ್ಪಿಜಿ ಬೆಲೆಗಳನ್ನು ಹೆಚ್ಚಿಸುವ ಪ್ರಸ್ತಾಪಗಳನ್ನು ಕಷ್ಟದ ಸನ್ನಿವೇಶದಲ್ಲಿ ಸಮರ್ಥಿಸಿಕೊಂಡರು," ಎಂದು ರಮೇಶ್ 2015 ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ವಿವರಿಸುತ್ತಾರೆ.
ಆ ವೇಳೆ ಜೈರಾಮ್ ರಮೇಶ್ ಪ್ರಧಾನ ಮಂತ್ರಿ ನರಸಿಂಹ ರಾವ್ ಅವರ ಸಹಾಯಕರಾಗಿದ್ದರು.
ಮನಮೋಹನ್ ಅವರು ಮಂಡಿಸಿದ್ದ ಬಜೆಟ್ ಗೆ ಕಾಂಗ್ರೆಸ್ ಹಿರಿಯ ನಾಯಕರಲ್ಲಿಯೇ ಅಸಮಾಧಾನ ಇರುವುದು ಪ್ರಧಾನಿ ನರಸಿಂಹ ರಾವ್ ಅವರ ಗಮನಕ್ಕೆ ಬಂತು. ಕೂಡಲೇ ಆಗಸ್ಟ್ 1, 1991 ರಂದು ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಸಭೆಯನ್ನು ಕರೆದು, ಪಕ್ಷದ ಸಂಸದರು ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಲು ನಿರ್ಧರಿಸಿದರು.
"ಸಭೆಯಲ್ಲಿ ಪ್ರಧಾನಿಯವರು ಚರ್ಚೆಯಿಂದ ದೂರ ಉಳಿದರು. ಮನಮೋಹನ್ ಸಿಂಗ್ ಅವರಿಗೆ ಅಸಮಾಧಾನವನ್ನು ಎದುರಿಸಲು ಅವಕಾಶ ಮಾಡಿಕೊಟ್ಟರು" ಎಂದು ಜೈರಾಮ್ ರಮೇಶ್ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ. ಆಗಸ್ಟ್ 2 ಮತ್ತು 3 ರಂದು ಇನ್ನೂ ಎರಡು ಸಭೆಗಳು ನಡೆದವು. ಅದರಲ್ಲಿ ಪ್ರಧಾನಿ ನರಸಿಂಹ ರಾವ್ ಅವರು ಉಪಸ್ಥಿತರಿದ್ದರು.
"CPP ಸಭೆಗಳಲ್ಲಿ, ಹಣಕಾಸು ಸಚಿವರು ಒಬ್ಬರೇ ಎಲ್ಲರನ್ನು ಎದುರಿಸಿದರು. ಪ್ರಧಾನ ಮಂತ್ರಿ ಮೂಕ ಪ್ರೇಕ್ಷಕರಾಗಿದ್ದರು" ಎಂದು ಜೈರಾಮ್ ರಮೇಶ್ ವಿವರಿಸುತ್ತಾರೆ.
ವಿಶೇಷವೆಂದರೆ ಕೇವಲ ಇಬ್ಬರು ಸಂಸದರು, ಮಣಿಶಂಕರ್ ಅಯ್ಯರ್ ಮತ್ತು ನಾಥುರಾಮ್ ಮಿರ್ಧಾ ಮಾತ್ರ ಮನಮೋಹನ್ ಸಿಂಗ್ ಅವರ ಬಜೆಟ್ ಅನ್ನು ಮನಪೂರ್ವಕವಾಗಿ ಬೆಂಬಲಿಸಿದ್ದರು.
ಅಯ್ಯರ್ ಅವರು ಹಣಕಾಸಿನ ಬಿಕ್ಕಟ್ಟನ್ನು ತಡೆಯಲು ಏನು ಮಾಡಬೇಕೆಂಬುದರ ಬಗ್ಗೆ ರಾಜೀವ್ ಗಾಂಧಿಯವರ ನಂಬಿಕೆಗಳಿಗೆ ಅನುಗುಣವಾಗಿದೆ ಎಂದು ಸಮರ್ಥಿಸಿಕೊಂದ್ದರು.
ಪಕ್ಷದ ಒತ್ತಡಕ್ಕೆ ಮಣಿದ ಡಾ.ಮನಮೋಹನ್ ಸಿಂಗ್ ಕೊನೆಗೆ ರಸಗೊಬ್ಬರ ಬೆಲೆಯಲ್ಲಿನ ಶೇ.40 ಹೆಚ್ಚಳವನ್ನು ಶೇ.30ಕ್ಕೆ ಇಳಿಸಲು ಒಪ್ಪಿಗೆ ನೀಡಿದ್ದರು. ಆದರೆ ಎಲ್ಪಿಜಿ ಮತ್ತು ಪೆಟ್ರೋಲ್ ಬೆಲೆ ಏರಿಕೆಯನ್ನು ಹಾಗೇ ಬಿಟ್ಟಿದ್ದರು.