ಕೋಚಿಂಗ್ ಕ್ಲಾಸ್ಗಳಿಗೆ ಹೆಚ್ಚಿನ ಬೇಡಿಕೆ ಭಾರತದ ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟವನ್ನು ಪ್ರತಿಬಿಂಬಿಸುತ್ತಿದೆ : ವರದಿ
Photo : scroll.in
ಹೊಸದಿಲ್ಲಿ : ಕಳೆದ ಜನವರಿಯಲ್ಲಿ ಬಿಡುಗಡೆಗೊಂಡ ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿ, 2023 ಗ್ರಾಮೀಣ ಪ್ರದೇಶಗಳಲ್ಲಿಯ 14ರಿಂದ 18 ವರ್ಷ ವಯೋಮಾನದ ಮಕ್ಕಳಲ್ಲಿ ಕಲಿಕೆಯ ಫಲಿತಾಂಶಗಳ ನಿರಾಶಾದಾಯಕ ಸ್ಥಿತಿಯನ್ನು ಎತ್ತಿ ತೋರಿಸಿದೆ.
ಗ್ರಾಮೀಣ ವಿದ್ಯಾರ್ಥಿಗಳು ಮೂಲ ಅಂಕಗಣಿತ ಹಾಗೂ ಸರಳ ಇಂಗ್ಲಿಷ್ ಪದಗಳು ಮತ್ತು ವಾಕ್ಯಗಳನ್ನು ಓದಲು ಮತ್ತು ಗ್ರಹಿಸಲು ಪರದಾಡುತ್ತಿದ್ದಾರೆ ಎಂದು ವರದಿಯು ಹೇಳಿದೆ. ಶಾಲಾ ಶಿಕ್ಷಣ ಮಟ್ಟದಲ್ಲಿ ಮೂಲಭೂತ ಮತ್ತು ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಇಂತಹ ಕೊರತೆಯು ಖಾಸಗಿ ತರಬೇತಿಯನ್ನು ನೆಚ್ಚಿಕೊಳ್ಳುವುದನ್ನು ಅಗತ್ಯವಾಗಿಸಿದೆ.
ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ಇರುವ ಭಾರೀ ಬೇಡಿಕೆಯು ಭಾರತದ ಯುವಜನರಲ್ಲಿ ನಿರುದ್ಯೋಗದ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತಿದೆ. ಭಾರತದಲ್ಲಿ ದುಡಿಯುವ ಯುವಜನರ ಸಂಖ್ಯೆ ಭಾರೀ ಪ್ರಮಾಣದಲ್ಲಿದ್ದು, ತನ್ಮೂಲಕ ದೇಶವು ಪಡೆಯುತ್ತಿರುವ ಜನಸಂಖ್ಯಾ ಲಾಭಾಂಶವು ಸುಮಾರು 15 ವರ್ಷಗಳಲ್ಲಿ, 2040ರ ವೇಳೆಗೆ ಕೊನೆಗೊಳ್ಳಲಿದೆ. ನಂತರ ದೇಶವು ಸೀಮಿತ ಸಂಪನ್ಮೂಲಗಳು ಮತ್ತು ಸುರಕ್ಷತಾ ಜಾಲಗಳೊಂದಿಗೆ ವಯಸ್ಸಾಗುತ್ತಿರುವವರ ದೊಡ್ಡ ವರ್ಗವನ್ನು ಬೆಂಬಲಿಸಲು ಹೆಣಗಾಡಬೇಕಾಗುತ್ತದೆ.
ಒಟ್ಟಾರೆಯಾಗಿ,ಈ ಕಳವಳಗಳು ಆರ್ಥಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಭಾರತವು ನಿರ್ಲಕ್ಷಿಸಲು ಸಾಧ್ಯವಾಗದ ಮಹತ್ವದ ಸವಾಲುಗಳನ್ನು ಒಡ್ಡಲಿವೆ. ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿ, 2023ಕ್ಕಾಗಿ ಸಮೀಕ್ಷೆಗೊಳಪಡಿಸಲಾಗಿದ್ದ ಹದಿಹರೆಯದವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು 3 ಮತ್ತು 4ನೇ ತರಗತಿಗಳ ಮೂಲಭೂತ ವಿಭಾಗದಲ್ಲಿ ಕಲಿಕೆಯ ಪರದಾಟವನ್ನು ಅನುಭವಿಸಿದ್ದರು. ಶೇ.57.3ರಷ್ಟು ಗ್ರಾಮಿಣ ಯುವಕರು ಇಂಗ್ಲಿಷ್ನಲ್ಲಿಯ ವಾಕ್ಯಗಳನ್ನು ಓದಲು ಸಮರ್ಥರಾಗಿದ್ದರು.
ಅಳತೆಯ ಆರಂಭದ ಬಿಂದುವನ್ನು ಝೀರೊ ಸೆಂಟಿಮೀಟರ್ನಿಂದ ದೂರಕ್ಕೆ ಸರಿಸಿದರೆ ಮಾಪಕವನ್ನು ಬಳಸಿಕೊಂಡು ಉದ್ದವನ್ನು ಅಳೆಯುವಂತಹ ಲೆಕ್ಕಾಚಾರಗಳನ್ನು ಸರಿಯಾಗಿ ಮಾಡುವಲ್ಲಿ ಶೇ.70ರಷ್ಟು ಜನರು ವಿಫಲಗೊಂಡಿದ್ದರು. ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಸಮಯ ಮತ್ತು ಅನುಪಾತವನ್ನು ಕಂಡು ಹಿಡಿಯುವ ಪ್ರಾಥಮಿಕ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗಿರಲಿಲ್ಲ. ಇದು ಮೂಲಭೂತ ಸಂಖ್ಯಾತ್ಮಕ ತಾರ್ಕಿಕತೆಯ ಅನುಪಸ್ಥಿತಿಯನ್ನು ಸೂಚಿಸುತ್ತದೆ.
ವರದಿಯು ಕಂಡುಕೊಂಡಿರುವ ಅಂಶಗಳು ಆಘಾತಕಾರಿಯಲ್ಲ. 2022ರ ವರದಿಯು ಗ್ರಾಮೀಣ ಶಾಲಾ ಮಕ್ಕಳಲ್ಲಿ ಇಂತಹುದೇ ಪ್ರವೃತ್ತಿಯನ್ನು ದಾಖಲಿಸಿತ್ತು. 8ನೇ ತರಗತಿಯ ಶೇ.30ರಷ್ಟು ಗ್ರಾಮೀಣ ಮಕ್ಕಳು ಎರಡನೇ ತರಗತಿಯ ಪಠ್ಯಪುಸ್ತಕಗಳನ್ನೂ ಓದಲು ಅಸಮರ್ಥರಾಗಿದ್ದರು. ಶೇ.55ರಷ್ಟು ಗ್ರಾಮೀಣ ಮಕ್ಕಳು ಭಾಗಿಸುವ ಸರಳ ಲೆಕ್ಕಾಚಾರವನ್ನು ಮಾಡಲೂ ವಿಫಲರಾಗಿದ್ದರು. ಶೇ.53ರಷ್ಟು ಗ್ರಾಮೀಣ ಮಕ್ಕಳಿಗೆ ಸುಲಭದ ಇಂಗ್ಲಿಷ್ ವಾಕ್ಯಗಳನ್ನು ಓದಲು ಸಾಧ್ಯವಾಗಿರಲಿಲ್ಲ ಮತ್ತು ಓದಲು ಸಾಧ್ಯವಾದವರಲ್ಲಿ ಶೇ.31.5ರಷ್ಟು ಮಕ್ಕಳಿಗೆ ತಾವು ಓದಿದ್ದರ ಅರ್ಥವನ್ನು ಹೇಳಲು ಸಾಧ್ಯವಾಗಿರಲಿಲ್ಲ.
1ರಿಂದ 8ನೇ ತರಗತಿವರೆಗಿನ ಶೇ.30.5ರಷ್ಟು ಗ್ರಾಮೀಣ ಮಕ್ಕಳು ಹಣ ತೆತ್ತು ಖಾಸಗಿ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು 2022ರ ವರದಿಯು ತೋರಿಸಿತ್ತು. ಕೆಲವು ರಾಜ್ಯಗಳಲ್ಲಿ ಇಂತಹ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಬಿಹಾರದಲ್ಲಿ ಶೇ.72, ಪಶ್ಚಿಮ ಬಂಗಾಳದಲ್ಲಿ ಶೇ.74 ಮತ್ತು ಜಾರ್ಖಂಡ್ನಲ್ಲಿ ಶೇ.45ರಷ್ಟು ಮಕ್ಕಳು ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ಸೇರಿಕೊಂಡಿದ್ದರು. ಕರ್ನಾಟಕ, ತಮಿಳುನಾಡು ಮತ್ತು ಗುಜರಾತಿನಂತಹ ಆರ್ಥಿಕವಾಗಿ ಅಭಿವೃದ್ಧಿಗೊಂಡ ಕೆಲವು ರಾಜ್ಯಗಳಲ್ಲಿ ಶೇ.9ರಿಂದ ಶೇ.10ರಷ್ಟು ಮಕ್ಕಳು ಖಾಸಗಿ ಕೋಚಿಂಗ್ಗೆ ಹೋಗುತ್ತಿದ್ದರು.
ಭಾರತದಲ್ಲಿ ಕೋಚಿಂಗ್ ಸಂಸ್ಕೃತಿಯು ಮಹಾನಗರಗಳಲ್ಲಿ ಮಾತ್ರವಲ್ಲ ,ವಿಶೇಷವಾಗಿ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಗ್ರಾಮೀಣ ಯುವಜನರ ಅಗತ್ಯವನ್ನು ಪೂರೈಸಲು ಸಣ್ಣಪಟ್ಟಣಗಳಲ್ಲಿಯೂ ಆಳವಾಗಿ ಬೇರೂರಿದೆ.
ಪರಿಸ್ಥಿತಿಗೆ ವಿಭಿನ್ನ ಆಯಾಮಗಳಿರುತ್ತವೆ. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿ ಭಾಷಿಕ ಪ್ರದೇಶಗಳ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವ ವಿದ್ಯಾರ್ಥಿಗಳಿಗಿಂತ ಹಿಂದೆ ಬೀಳುತ್ತಾರೆ. ಇದು ಅವರಿಗೆ ಕೋಚಿಂಗ್ನ್ನು ಅಗತ್ಯವಾಗಿಸಿದೆ. ಹೆತ್ತವರು ಹೊಂದಿರುವ ಹೆಚ್ಚಿನ ಮಹತ್ವಾಕಾಂಕ್ಷೆಗಳೂ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕೋಚಿಂಗ್ ಸೆಂಟರ್ಗಳನ್ನು ಸೇರುವಂತೆ ಮಾಡುತ್ತವೆ.
ಇಂದು ಶಿಕ್ಷಣದ ಮೂಲಭೂತ ಹಕ್ಕು ಗುಣಮಟ್ಟದ ಶಿಕ್ಷಣದ ಹಕ್ಕು ಆಗಿ ಪರಿವರ್ತನೆಗೊಂಡಿಲ್ಲ ಮತ್ತು ಇದರಿಂದಾಗಿ ಖಾಸಗಿ ಟ್ಯೂಷನ್ ಮತ್ತು ಕೋಚಿಂಗ್ ಸೆಂಟರ್ಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ.
ಸುದೀರ್ಘ ಕಾಲದಿಂದ ಕೋಚಿಂಗ್ ಸಂಸ್ಥೆಗಳು ಯಾವುದೇ ನಿಯಂತ್ರಣವಿಲ್ಲದ ಮಾರುಕಟ್ಟೆಯಂತಿದ್ದವು. ಹಲವಾರು ದೂರುಗಳು ಮತ್ತು ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳ ಬಳಿಕ ಸರಕಾರವು ಕೋಚಿಂಗ್ ಸೆಂಟರ್ಗಳ ಮೇಲೆ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ತಂದಿದೆ.
ಆದರೆ ನಿಜವಾದ ಪರಿಹಾರವು ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿಯಾಗಿರುವ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಫಲಿತಾಂಶಗಳನ್ನು ಉತ್ತಮಗೊಳಿಸುವಲ್ಲಿ ಅಡಗಿದೆ.
ಪ್ರತಿಯೊಬ್ಬರಿಗೂ ಕೋಚಿಂಗ್ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಸರಕಾರಿ ಉದ್ಯೋಗಗಳಿಗಾಗಿ ಹಾತೊರೆಯಲು ಸಾಧ್ಯವಿಲ್ಲ. ಕೈಗಾರಿಕೆ ಆಧಾರಿತ ಚಟುವಟಿಕೆಗಳಲ್ಲಿ ಕುಸಿತ ಮತ್ತು ರಚನಾತ್ಮಕ ಬದಲಾವಣೆಯು ಹಿಮ್ಮುಖಗೊಂಡ ನಂತರ ಈಗ ಉಳಿದಿರುವುದು ಗಿಗ್ ಆರ್ಥಿಕತೆ (ಮುಕ್ತ ಮಾರುಕಟ್ಟೆ ವ್ಯವಸ್ಥೆ)ಯಾಗಿದ್ದು,ಇದು ಯಾವುದೇ ಸಾಮಾಜಿಕ ಸುರಕ್ಷತಾ ಜಾಲವಿಲ್ಲದೆ ಕೇವಲ ಜೀವನಾಧಾರವನ್ನು ಒದಗಿಸುತ್ತದೆ. ಹೀಗಾಗಿ ಉದ್ಯೋಗಗಳ ಪುನಃಶ್ಚೇತನಕ್ಕೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ.