ಮಧ್ಯಪ್ರದೇಶ | ಸರಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: 190ಕ್ಕೂ ಅಧಿಕ ರೋಗಿಗಳ ಸ್ಥಳಾಂತರ

Photo credit: NDTV
ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಗರದ ಸರಕಾರಿ ಆಸ್ಪತ್ರೆಯಲ್ಲಿ ರವಿವಾರ ಮುಂಜಾನೆ ಅಗ್ನಿ ಅನಾಹುತ ಸಂಭವಿಸಿದೆ. ಈ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ 190ಕ್ಕೂ ಅಧಿಕ ರೋಗಿಗಳನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ವಾಲಿಯರ್ನ ಕಮಲರಾಜ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ತೀವ್ರ ನಿಗಾ ಘಟಕದಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಅಗ್ನಿ ಅನಾಹುತ ಸಂಭವಿಸಿದೆ. ಐಸಿಯುನಲ್ಲಿದ್ದ 13 ಮಂದಿ ಸೇರಿದಂತೆ 190ಕ್ಕೂ ಹೆಚ್ಚು ರೋಗಿಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಕಿಟಕಿಗಳನ್ನು ಒಡೆದು ಐಸಿಯುನಲ್ಲಿ ದಾಖಲಾಗಿದ್ದ ರೋಗಿಗಳನ್ನು ಸ್ಥಳಾಂತರಿಸಿದರು. ಆಸ್ಪತ್ರೆಯ ಐಸಿಯು ಮತ್ತು ಇತರ ವಾರ್ಡ್ಗಳ ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗ್ವಾಲಿಯರ್ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ತಿಳಿಸಿದರು.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಆಸ್ಪತ್ರೆಯ ಸಿಬ್ಬಂದಿಗಳು ತಕ್ಷಣ ರೋಗಿಗಳನ್ನು ಹೊರಕ್ಕೆ ಸ್ಥಳಾಂತರಿಸಿದರು, ಆ ಬಳಿಕ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ʼಬೆಂಕಿ ತಗುಲಿದ ನಂತರ ಆಸ್ಪತ್ರೆ ಆವರಣ ಹೊಗೆ ಆವರಿಸಿತ್ತು. ಕೂಡಲೇ ಅಲ್ಲಿದ್ದ ಸಿಬ್ಬಂದಿ ಎಲ್ಲಾ ರೋಗಿಗಳನ್ನು ಸ್ಥಳಾಂತರಿಸಲು ಆರಂಭಿಸಿದರು. ಹೊಗೆ ದಟ್ಟವಾಗಿ ಆವರಿಸಿದ್ದರಿಂದ ಮತ್ತೆ ಏನೂ ನಮಗೆ ಕಾಣಿಸಲಿಲ್ಲʼ ಎಂದು ಪ್ರತ್ಯಕ್ಷದರ್ಶಿಯೋರ್ವರು ಹೇಳಿದ್ದಾರೆ.