ಈರೋಡ್ ಉಪಚುನಾವಣೆ | ಡಿಎಮ್ಕೆಗೆ ಬೃಹತ್ ವಿಜಯ

PC : PTI
ಈರೋಡ್ (ತಮಿಳುನಾಡು): ತಮಿಳುನಾಡಿನ ಈರೋಡ್ (ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಮ್ (ಡಿಎಮ್ಕೆ) ಪಕ್ಷವು ಅಗಾಧ ಅಂತರದಿಂದ ವಿಜಯಿಯಾಗಿದೆ. ಶನಿವಾರ ನಡೆದ ಮತ ಎಣಿಕೆಯಲ್ಲಿ, ಡಿಎಮ್ಕೆ ಅಭ್ಯರ್ಥಿ ವಿ.ಸಿ. ಚಂದಿರಕುಮಾರ್ ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಪಕ್ಷದ ಎಮ್.ಕೆ. ಸೀತಾಲಕ್ಷ್ಮಿಯನ್ನು 91,558 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಚಂದಿರಕುಮಾರ್ 1,15,709 ಮತಗಳನ್ನು ಪಡೆದರೆ, ಸೀತಾಲಕ್ಷ್ಮಿ 25,151 ಮತಗಳನ್ನು ಗಳಿಸಿದರು.
ಕುತೂಹಲದ ಸಂಗತಿಯೆಂದರೆ, 46 ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ನೋಟಾ (ಯಾವ ಅಭ್ಯರ್ಥಿಯೂ ಬೇಡ) ಪರವಾಗಿ 6,109 ಮತಗಳು ಬಿದ್ದಿವೆ.
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಶಾಸಕ ಇ.ವಿ.ಕೆ.ಎಸ್. ಇಳಂಗೋವನ್ ಕಳೆದ ವರ್ಷದ ಡಿಸೆಂಬರ್ 14ರಂದು ನಿಧನರಾದ ಹಿನ್ನೆಲೆಯಲ್ಲಿ ಅವರ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಕೇವಲ ಎರಡು ಪ್ರಮುಖ ಪಕ್ಷಗಳು ಸ್ಪರ್ಧಿಸಿದ್ದವು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಮ್ (ಎಐಎಡಿಎಮ್ಕೆ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಮ್ (ಟಿವಿಕೆ) ಉಪಚುನಾವಣೆಯನ್ನು ಬಹಿಷ್ಕರಿಸಿದ್ದವು.
ಡಿಎಮ್ಕೆ ಅಭ್ಯರ್ಥಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡರು. ಪ್ರತಿ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆಯೇ ಅವರ ವಿಜಯದ ಅಂತರ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿತ್ತು.
ಇದೇ ಕ್ಷೇತ್ರದ ಮಾಜಿ ಶಾಸಕ ಚಂದಿರಕುಮಾರ್ 74.7 ಶೇಕಡ ಮತಗಳನ್ನು ಪಡೆದರೆ, ಸೀತಾಲಕ್ಷ್ಮಿ 15.59 ಶೇಕಡ ಮತಗಳನ್ನು ಗಳಿಸಿದರು.