ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಕಾಂಗ್ರೆಸ್ ಮುಖಂಡರಿಂದ ನೂರಾರು ದೇಗುಲ ಭೇಟಿ
ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮಾಯಿ ಗ್ರಾಮದಲ್ಲಿ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ |Photo: PTI
ಇಂಫಾಲ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಪಕ್ಷದ ಮುಖಂಡರು ನೂರಾರು ದೇಗುಲಗಳಿಗೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಿಸಿದೆ. ಆದರೆ ಅಯೋಧ್ಯೆಯ ಮಂದಿರ ಉದ್ಘಾಟನೆ ಬಿಜೆಪಿಯ ರಾಜಕೀಯ ಕಾರ್ಯಕ್ರಮವಾಗಲಿದೆ ಎಂದು ಪಕ್ಷ ಹೇಳಿದೆ.
ಜನವರಿ 22ರ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾಗಾಂಧಿಯವರಿಗೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವ ನಿಲುವಿಗೆ ಪಕ್ಷ ಬದ್ಧವಾಗಿದ್ದು, ದೇವಾಲಯ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಪರಿಕಲ್ಪನೆ ಭಾರತೀಯ ಸಂಸ್ಕೃತಿಯಲ್ಲಿ ವಿಚಿತ್ರ. ಏಕೆಂದರೆ ದೇಗುಲ ಯಾತ್ರೆಗಳು ಅನುಯಾಯಿಗಳಿಗೆ ದೈವಿಕ ಕರೆಗಳನ್ನು ಅನುಸರಿಸುವಂಥದ್ದು ಎಂದು ವಕ್ತಾರ ಕನ್ಹಯ್ಯಾ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ನಾಸ್ತಿಕ ಪಕ್ಷವಲ್ಲ; ಯಾವುದೇ ಧಾರ್ಮಿಕ ಸಮಾರಂಭವನ್ನು ವಿರೋಧಿಸುವುದಿಲ್ಲ. "ನಾವು ಏಕೆ ದೇವಾಲಯಗಳಿಗೆ ಹೋಗುವುದಿಲ್ಲವೇ? ಯಾತ್ರೆ ವೇಳೆ ನೂರಾರು ದೇಗುಲಗಳಿಗೆ ಭೇಟಿ ನೀಡುತ್ತೇವೆ; ಮಸೀದಿ, ಚರ್ಚ್ ಹಾಗೂ ಗುರುದ್ವಾರಗಳಿಗೂ ಹೋಗುತ್ತೇವೆ. ನಾವು ಎಲ್ಲರ ಪಕ್ಷ. ಈ ಕಾರಣದಿಂದ ಕಾಂಗ್ರೆಸ್, ಭಾರತ ಜೋಡೋ ಯಾತ್ರೆ ಕೈಗೊಳ್ಳುತ್ತಿದೆ" ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಆಗಿರುವ ಗಾಯ ಶಮನಗೊಳಿಸುವ ಸಲುವಾಗಿ ರಾಜ್ಯಕ್ಕೆ ಭೇಟಿ ನೀಡಬೇಕು ಎಂಬ ಆಗ್ರಹವನ್ನು ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಕಾಂಗ್ರೆಸ್ ಪಕ್ಷ ಒತ್ತಾಯಿಸಲಿದೆ.