ಮೋದಿಯ ಅಮೃತಕಾಲದಲ್ಲಿ ʼನಿರುದ್ಯೋಗದ ಹಸಿವುʼ
thewire.in ವರದಿ
Photo: Overseas Development Institute
ಚುನಾವಣಾ ರಾಜಕಾರಣವು ತೀವ್ರ ಸ್ವರೂಪ ಪಡೆಯುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಹೆಚ್ಚು ದ್ವಂದ್ವಗಳಲ್ಲಿ ಸಿಲುಕುತ್ತಿದ್ದಾರೆ.
ಛತ್ತೀಸ್ ಗಢದಲ್ಲಿನ ಚುನಾವಣಾ ಅಭಿಯಾನದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ, 80 ಕೋಟಿ ಮಂದಿಗೆ ಉಚಿತ ಪಡಿತರ ವಿತರಿಸುವ ಯೋಜನೆಯ ವಿಸ್ತರಣೆಯನ್ನು ವಿಜೃಂಭಣೆಯಿಂದ ಪ್ರಕಟಿಸಿದರು.
ಕೋವಿಡ್ ಪರಿಣಾಮವನ್ನು ತಗ್ಗಿಸಲು ಬಡ ಭಾರತೀಯರಿಗೆ ಉಚಿತ ಪಡಿತರವನ್ನು ವಿತರಿಸಲು ಜಾರಿಗೆ ತರಲಾಗಿದ್ದ ಈ ಯೋಜನೆಯು ಮತ್ತೆ ಐದು ವರ್ಷಗಳ ವಿಸ್ತರಣೆಗೊಳ್ಳಲಿದೆ. ತಮ್ಮ ನಿಲುವಿಗೆ ವಿರುದ್ಧವಾಗಿ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಭಾರತೀಯರಿಗೆ ನೀಡುತ್ತಿರುವ ʼಮೋದಿ ಖಾತರಿʼ ಎಂದು ಬಣ್ಣಿಸಿದ್ದಾರೆ.
ತಮ್ಮ ಭಾಷಣದಲ್ಲಿ ಮೋದಿ ಡಂಗೂರ ಹೊಡೆದ ಮತ್ತೊಂದು ಖಾತರಿ – ಭಾರತವು ತಮ್ಮ ಮೂರನೆ ಅವಧಿಯ ಪ್ರಧಾನ ಮಂತ್ರಿಗಿರಿಯ ಅವಧಿಯಲ್ಲಿ ವಿಶ್ವದ ಮೂರನೆಯ ಬಲಿಷ್ಠ ಆರ್ಥಿಕತೆ ಆಗಲಿದೆ ಎಂಬುದು. ಜನರಿಗೆ ಸಂದೇಶ ನೀಡುವಾಗಲೆಲ್ಲ ಮೋದಿಯು ಅನಗತ್ಯವಾಗಿ ತಮ್ಮ ಮೂರನೆಯ ಅವಧಿಯು ದೈವಿಕ ನಿರ್ಧಾರ ಎಂಬಂತೆ ಪ್ರತಿಪಾದಿಸುತ್ತಿರುತ್ತಾರೆ.
ಸದ್ಯ, ರಾಜಕೀಯ ಆರ್ಥಿಕತೆಯ ವಿರೋಧಾಭಾಸವು ಇಲ್ಲಿದೆ.
2028ರ ವೇಳೆಗೆ ಭಾರತವು ವಿಶ್ವದ ಮೂರನೆಯ ಬಲಿಷ್ಠ ಆರ್ಥಿಕತೆಯಾಗಲಿದೆ ಎಂದು ಹೇಳುತ್ತಿರುವ ಪ್ರಧಾನಿ ಮೋದಿ, ಅಂದಮೇಲೆ 80 ಕೋಟಿ ಜನರಿಗೆ ಉಚಿತ ಪಡಿತರವನ್ನೇಕೆ ವಿತರಿಸಬೇಕು ಎಂಬ ಬಗ್ಗೆ ವಿವರಿಸಲು ಸಾಧ್ಯವಾಗುತ್ತಿಲ್ಲ. ಭಾರತವು ವೇಗವಾಗಿ ಸಮೃದ್ಧಿ ಹೊಂದುತ್ತಾ, ಅಮೃತ ಕಾಲವನ್ನು ಪ್ರವೇಶಿಸುತ್ತಿರುವ ಕಾರಣಕ್ಕೆ ಇನ್ನೂ ಐದು ವರ್ಷಗಳ ಕಾಲ ಉಚಿತ ಪಡಿತರವನ್ನು ವಿತರಿಸಬೇಕೆ?
ಮತ್ತೊಂದೆಡೆ, ಒಂದು ವೇಳೆ ಭಾರತವು ಇಷ್ಟು ವೇಗವಾಗಿ ಅಭಿವೃದ್ಧಿಯಾಗುತ್ತಿರುವುದಾದರೆ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಮತ್ತೆ ಏಕೆ ಕೆಳಗೆ ಕುಸಿದಿದೆ? 2023ರ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ, 125 ದೇಶಗಳ ಪೈಕಿ ಮತ್ತೆ ನಾಲ್ಕು ಸ್ಥಾನ ಕೆಳಗೆ ಕುಸಿದಿರುವ ಭಾರತವು 111ನೇ ಸ್ಥಾನಕ್ಕೆ ತಲುಪಿದೆ. ಮೋದಿ ಸರ್ಕಾರವು ಈ ಜಾಗತಿಕ ಹಸಿವು ವರದಿಯನ್ನು ಅಲ್ಲಗಳೆಯುತ್ತದಾದರೂ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆವೈ) ಅಡಿ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಮೂಲಕ ಆ ವರದಿಯನ್ನು ಸಮರ್ಥಿಸುತ್ತಲೂ ಇದೆ.
ನಿಶ್ಚಿತವಾಗಿ ಇದು 10 ವರ್ಷಗಳನ್ನು ಸಮೀಪಿಸುತ್ತಿರುವ ಪ್ರಧಾನಿ ಮೋದಿಯ ಆಡಳಿತದಲ್ಲಿನ ತೀವ್ರ ವಿರೋಧಾಭಾಸವಾಗಿದ್ದು, ಇದು ರಾಜಕೀಯ ಆರ್ಥಿಕತೆಯನ್ನು ಸೂಚಿಸುತ್ತಿದೆ. ಹತ್ತು ವರ್ಷಗಳ ಅವಧಿಯು ಪ್ರಗತಿ, ಉದ್ಯೋಗಾವಕಾಶ, ಉಳಿತಾಯ ದರ, ಖಾಸಗಿ ಹೂಡಿಕೆ, ವಿದೇಶಿ ಹೂಡಿಕೆಯಲ್ಲಿನ ಏರಿಕೆ, ರಫ್ತು ಮತ್ತಿತರ ತಳಮಟ್ಟದ ನೈಜ ಅಭಿವೃದ್ಧಿಯನ್ನು ಮಾಡಲು ಸಾಕಾಗುವಷ್ಟು ದೀರ್ಘಾವಧಿಯಾಗಿದೆ. ಈ ಎಲ್ಲ ಲೆಕ್ಕಾಚಾರಗಳ ಆಧಾರದಲ್ಲಿ ಕಳಪೆ ಪ್ರದರ್ಶನವಾಗಿರುವುದನ್ನು ಕಟುವಾಗಿರುವ ದತ್ತಾಂಶಗಳು ತೋರಿಸುತ್ತಿವೆ. ಹೀಗಿದ್ದೂ, ವಿಶ್ವ ಆರ್ಥಿಕತೆಯಲ್ಲಿ ಭಾರತಕ್ಕೆ ಭವ್ಯ ಅವಕಾಶವಿದೆ ಎಂದು ಅತಿರೇಕದ ಬಣ್ಣನೆ ಮಾಡುವ ಕ್ರಿಯೆಯಿಂದ ಪ್ರಧಾನಿ ಹಾಗೂ ಅವರ ಸಾರ್ವಜನಿಕ ಸಂಪರ್ಕ ಯಂತ್ರಾಂಗವನ್ನು ಈ ವಾಸ್ತವವು ಹಿಮ್ಮೆಟ್ಟಿಸಿಲ್ಲ. ಚುನಾವಣಾ ಋತುವಿನಲ್ಲಿ ಈ ನಿರೂಪಣೆಯನ್ನು ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವಾರು ಮಾಧ್ಯಮ ವಾಹಿನಿಗಳ ಮೂಲಕ ಬೊಬ್ಬಿಡಲಾಗುತ್ತಿದೆ.
ಆದರೆ, ಇನ್ನೂ ಐದು ವರ್ಷಗಳ ಕಾಲ ಉಚಿತ ಪಡಿತರ ಪೂರೈಕೆಯನ್ನು ವಿಸ್ತರಿಸುವ ಪ್ರಕರಣದಂತೆಯೆ ಈಗಲೂ ಮತ್ತು ಹಿಂದೆಯೂ ಈ ವಿರೋಧಾಭಾಸಗಳು ತಮಗೆ ತಾವೇ ಬಯಲಾಗಿವೆ. ಮೋದಿ ತಾವು ಅಧಿಕಾರಕ್ಕೆ ಬಂದಾಗ ಖುಲ್ಲಂಖುಲ್ಲಾ ತಳ್ಳಿ ಹಾಕಿದ್ದ ಮತ್ತೊಂದು ಯೋಜನೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ, ನೈಜ ಆರ್ಥಿಕ, ಔದ್ಯೋಗಿಕ ಹಾಗೂ ಆದಾಯ ಪ್ರಗತಿಯಲ್ಲಿ ವಿಫಲಗೊಂಡ ಯೋಜನೆ ಎಂದು ಬಿಂಬಿತವಾಗಿದ್ದ MNREGA. ಆದರಿಂದು, ಮೋದಿ ಹಾಗೂ ಅವರ ಸರ್ಕಾರದ ಪಾಲಿನ ವ್ಯಂಗ್ಯವೆಂದರೆ, ಈ ಆರ್ಥಿಕ ವರ್ಷದ ಸಾಲಿನಲ್ಲಿ ಮೀಸಲಿರಿಸಲಾಗಿದ್ದ ಗ್ರಾಮೀಣ ಉದ್ಯೋಗ ಖಾತರಿ ಆಯವ್ಯಯದ ಶೇ. 93ರಷ್ಟು ಮೊತ್ತವು ಮೊದಲ ಆರು ತಿಂಗಳ ಅವಧಿಯಲ್ಲೇ ಖರ್ಚಾಗಿ ಹೋಗಿದೆ. ಈ ಯೋಜನೆಯು ಬೇಡಿಕೆಯನ್ನು ಆಧರಿಸಿದ ಯೋಜನೆಯಾಗಿರುವುದರಿಂದ, ಇದಕ್ಕಾಗಿ ಮೀಸಲಿಟ್ಟಿರುವ ರೂ. 60,000 ಕೋಟಿ ಬಜೆಟ್ ಮೊತ್ತವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. 10 ವರ್ಷಗಳ ಬಿಜೆಪಿ ಆಡಳಿತದ ನಂತರ ಮೋದಿ ಆರ್ಥಿಕತೆಯ ಬಗೆಗಿನ ನೈಜ ಸಾಕ್ಷ್ಯ ಇದೇನಾ?
ಕಳೆದ 10 ವರ್ಷಗಳಲ್ಲಿ ಮೋದಿಯು ಅಧಿಕ ಜಿಡಿಪಿ ಬೆಳವಣಿಗೆಯನ್ನೇ ಖಾತರಿಗೊಳಿಸಲಾಗಲಿಲ್ಲ. ಅದು ಕಳೆದ ಒಂಬತ್ತು ವರ್ಷಗಳಿಂದ ಶೇ. 5.7ರ ಆಸುಪಾಸಿನಲ್ಲೇ ಇದೆ. 2014ರಲ್ಲಿ ತಾವು ನೀಡಿದ್ದ ವಾರ್ಷಿಕ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯಲ್ಲೇ ಅವರು ದಯನೀಯವಾಗಿ ವಿಫಲಗೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಕೃಷಿ ವೆಚ್ಚದೊಂದಿಗೆ ಹೋಲಿಸಿದಾಗ ರೈತರ ಆದಾಯ ದ್ವಿಗುಣಗೊಳಿಸುವ ತಮ್ಮ ಭರವಸೆಯಲ್ಲೂ ಅವರು ವಿಫಲವಾಗಿರುವುದಕ್ಕೆ ಸಾಕ್ಷಿ ದೊರೆಯುತ್ತದೆ.
ಹೀಗಾಗಿ, ಅವರು ಮತ್ತೆ ಐದು ವರ್ಷಗಳ ಕಾಲ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಖಾತರಿ ನೀಡುತ್ತಿದ್ದಾರೆ.
ಮೋದಿ ಸರ್ಕಾರದ ಆರ್ಥಿಕ ನಿರ್ವಹಣೆಯಲ್ಲಿನ ದಯನೀಯ ವೈಫಲ್ಯ ಅಥವಾ ಕೊರತೆಯ ಕುರಿತು ಹೊರ ಬಂದ ವಿನಾಶಕಾರಿ ಸಾಕ್ಷ್ಯವೆಂದರೆ, ಸಾಂಖ್ಯಿಕ ಇಲಾಖೆಯು ಜುಲೈ 2022ರಿಂದ ಜುಲೈ 2023ರ ನಡುವಿನ ಉದ್ಯೋಗಿ ಬಲದ ಕುರಿತು ಕಳೆದ ತಿಂಗಳು ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ. ಈ ಸಮೀಕ್ಷೆಯಲ್ಲಿ ದೊಡ್ಡ ಸಂಖ್ಯೆಯ ಜನರು ಸ್ವಯಂ ಉದ್ಯೋಗಿಗಳಾಗಿದ್ದು, 2022-23ರ ನಡುವೆ ಒಟ್ಟು ಉದ್ಯೋಗ ಪಡೆದಿರುವವರ ಪೈಕಿ ಶೇ. 58ರಷ್ಟು ಮಂದಿ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಭಾರತದ ಆರ್ಥಿಕತೆಯಲ್ಲಿ ಒಟ್ಟು ಉದ್ಯೋಗಿಗಳಾಗಿರುವ ಸಂಖ್ಯೆ 50 ಕೋಟಿ ಸಂಖ್ಯೆಯ ಆಸುಪಾಸು. 2017-18ರ ಅವಧಿಯ ಸ್ವಯಂ ಉದ್ಯೋಗ ವರ್ಗದಲ್ಲಿ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಣ್ಣ ವರ್ತಕರು ಹಾಗೂ ವೈಯಕ್ತಿಕ ಸೇವೆಯನ್ನು ಒದಗಿಸುವವರ ಪ್ರಮಾಣ ಕೇವಲ ಶೇ. 52ರಷ್ಟಿತ್ತು ಎಂದು ಹೇಳಲಾಗಿದೆ.
ಸ್ವಯಂ ಉದ್ಯೋಗಗಳಲ್ಲಿ ದೊಡ್ಡ ಏರಿಕೆಯಾಗಿರುವುದರ ಅರ್ಥ, ಅನುತ್ಪಾದಕ ವಲಯದಲ್ಲಿ ಕಡಿಮೆ ದರ್ಜೆಯ ಉದ್ಯೋಗಾವಕಾಶಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ ಎಂದು. ಈ ಪುರಾವೆ ಏಕೆಂದರೆ, ಸ್ವಯಂ ಉದ್ಯೋಗಿಗಳ ಪೈಕಿ ಮೂರನೆಯ ಒಂದು ಭಾಗದಷ್ಟು ಮಂದಿ ಸಣ್ಣ ಕುಟುಂಬಗಳು ನಡೆಸುವ ಘಟಕಗಳಲ್ಲಿ ಯಾವುದೇ ವೇತನವಿಲ್ಲದೆ ದುಡಿಯುವ ಸಂಬಳರಹಿತ ಕುಟುಂಬದ ಸದಸ್ಯರೇ ಆಗಿರುತ್ತಾರೆ. ಹೀಗಾಗಿ, ಸ್ವಯಂ ಉದ್ಯೋಗಿಗಳ ಪ್ರಮಾಣ ಹಾಗೂ ಆ ಅನುಪಾತದಲ್ಲಿನ ಸಂಬಳರಹಿತ ಉದ್ಯೋಗಿಗಳ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ನಾಟಕೀಯವಾಗಿ ಏರಿಕೆಯಾಗಿದೆ. ವಿಶೇಷವಾಗಿ, ನೋಟು ಅಮಾನ್ಯೀಕರಣ ಮತ್ತು ಸಾಂಕ್ರಾಮಿಕದ ನಂತರ.
ಆರ್ಥಿಕ ತಜ್ಞ ಸಂತೋಷ್ ಮೆಹ್ರೋತ್ರಾ ಪ್ರಕಾರ, 2017-18ನೇ ಅವಧಿಯಲ್ಲಿ 40 ದಶಲಕ್ಷದಷ್ಟಿದ್ದ ಸ್ವಯಂ ಉದ್ಯೋಗಿಗಳ ವರ್ಗದಲ್ಲಿ ಸಂಬಳರಹಿತ ಉದ್ಯೋಗಿಗಳ ಸಂಖ್ಯೆಯು, 2022-23ನೇ ಅವಧಿಯಲ್ಲಿ 95 ದಶಲಕ್ಷಕ್ಕೆ ಏರಿಕೆಯಾಗಿದೆ. ಇಂದು 92 ದೇಶಗಳು ಪಾಲನೆ ಮಾಡುತ್ತಿರುವ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯು ನಿಗದಿಪಡಿಸಿರುವ ವಿಧಾನಶಾಸ್ತ್ರದ ಪ್ರಕಾರ, ಇಂತಹ ಸಂಬಳರಹಿತ ಕಾರ್ಮಿಕರನ್ನು ಉದ್ಯೋಗಸ್ಥರು ಎಂದು ಭಾವಿಸಲಾಗುವುದಿಲ್ಲ ಎನ್ನುತ್ತಾರೆ ಮೆಹ್ರೋತ್ರಾ.
ಇದು ಬಹುಶಃ ಆರ್ಥಿಕ ರಚನೆಯಲ್ಲಿನ ಬಹುದೊಡ್ಡ ದೌರ್ಬಲ್ಯವಾಗಿ ಹೊರಹೊಮ್ಮಿದ್ದು, 2017-18 ಹಾಗೂ 2022-23ರ ನಡುವಿನ ನೈಜ ಲೆಕ್ಕಾಚಾರದ ಪ್ರಕಾರ ನಿಯಮಿತ ಮಾಸಿಕ ವೇತನವು ಶೇ. 20ರಷ್ಟು ಕುಸಿತ ಕಂಡಿದೆ ಎಂಬುದು ಉದ್ಯೋಗಿ ಬಲ ಸಮೀಕ್ಷೆಯಲ್ಲೂ ವ್ಯಕ್ತವಾಗಿತ್ತು. ಸ್ವಯಂ ಉದ್ಯೋಗ ಹಾಗೂ ಔಪಚಾರಿಕ ವರ್ಗಗಳಲ್ಲೂ ನೈಜ ಲೆಕ್ಕಚಾರದಲ್ಲಿ ನೈಜ ವೇತನ ಪ್ರಮಾಣವು ಕುಸಿತಗೊಂಡಿರುವುದು ಕಂಡು ಬಂದಿದೆ.
ಕಳೆದ ಐದು ವರ್ಷಗಳಲ್ಲಿ ಸರಾಸರಿ ವೇತನದಲ್ಲಿ ಯಾವುದೇ ಪ್ರಗತಿಯಾಗದಿರುವುದರ ಅರ್ಥ, ಉದ್ಯೋಗ ಗುಣಮಟ್ಟವು ನಿಶ್ಚಿತವಾಗಿ ಕಳಪೆಯಾಗುತ್ತಿದೆ ಎಂದು. ಈ ಸಂಗತಿಯನ್ನು ನಿರ್ಮಾಣ ಅಥವಾ ಸಾರಿಗೆ (ಉಬರ್ ಅಥವಾ ಓಲಾ ಚಾಲಕರು) ವಲಯದಲ್ಲಿನ ವೈಯಕ್ತಿಕ ಸೇವೆ ಒದಗಿಸುವವರನ್ನು ಪ್ರಶ್ನಿಸುವ ಮೂಲಕವೂ ಪರಿಶೀಲಿಸಬಹುದಾಗಿದೆ. ತಮ್ಮ ಜೀವನ ವೆಚ್ಚವು ಏರಿಕೆಯಾಗಿದ್ದರೂ, ನೈಜ ಲೆಕ್ಕಾಚಾರದಲ್ಲಿ ತಮ್ಮ ವೇತನಗಳು ಇಂದಿಗೂ ಯಥಾಸ್ಥಿತಿಯಲ್ಲಿವೆ ಎಂಬ ಸಂಗತಿಯನ್ನು ಅವರು ತಿಳಿಸುತ್ತಾರೆ.
ಯಥಾಸ್ಥಿತಿ ವೇತನವು ಖರೀದಿ ಸಾಮರ್ಥ್ಯದಲ್ಲಿನ ಕೊರತೆಯನ್ನೂ ಬಿಂಬಿಸುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ಹಿಂದೂಸ್ತಾನ್ ಲೀವರ್, ಬಜಾಜ್ ಆಟೊದಂತಹ ಗ್ರಾಹಕ ಕಂಪನಿಗಳಿಗೆ ಗ್ರಾಮೀಣ ಭಾಗದಲ್ಲಿ ಬೇಡಿಕೆ ಪ್ರಮಾಣದ ಕೊರತೆ ಕಂಡು ಬಂದಿದೆ. ಬಜಾಜ್ ಆಟೊದಂಥ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಗಳು ಐದು ಅಥವಾ ಆರು ವರ್ಷಗಳ ಹಿಂದೆ ಮಾರಾಟ ಮಾಡುತ್ತಿದ್ದ ವಾಹನಗಳಿಗಿಂತ ಇಂದು ಶೇ. 30ರಿಂದ 40ರಷ್ಟು ಕಡಿಮೆ ವಾಹನಗಳನ್ನು ಮಾರಾಟ ಮಾಡುತ್ತಿವೆ. ಇಂತಹ ಪರಿಸ್ಥಿತಿಯನ್ನು ಅವು ಹಿಂದೆಂದೂ ಅನುಭವಿಸಿರಲಿಲ್ಲ. ಮತ್ತೊಂದೆಡೆ, ಎಸ್ಯುವಿ, ಆಭರಣಗಳು, ವಿದ್ಯುನ್ಮಾನ ಸಾಧನಗಳು, ಹೋಟೆಲ್ ಗಳು, ವಿಮಾನ ಪ್ರಯಾಣ ಇತ್ಯಾದಿ ಐಷಾರಾಮಿ ವಸ್ತುಗಳ ಬಳಕೆಯಲ್ಲಿ ದೃಢವಾದ ಏರಿಕೆಯಾಗುತ್ತಿದೆ. ಈ ವಲಯಗಳಲ್ಲಿ ಸೇವೆ ನೀಡುತ್ತಿರುವ ಕಂಪನಿಗಳು ಉತ್ತಮವಾಗಿ ಕಾರ್ಯಾಚರಿಸುತ್ತಿರುವಂತೆ ಕಾಣುತ್ತಿದೆ.
ಇದೇ ವೇಳೆ, ಕೆಳ ಮಧ್ಯಮ ವರ್ಗದ ಬಳಕೆಯು ಸಾರ್ವಕಾಲಿಕ ಕುಸಿತಕ್ಕೆ ಒಳಗಾಗಿರುವಂತೆ ತೋರುತ್ತಿದೆ.
ಉದ್ಯೋಗಿ ಬಲದ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ವೇತನ ಯಥಾಸ್ಥಿತಿಯು ತಳಮಟ್ಟದಲ್ಲಿರುವ ಶೇ. 60ರಿಂದ ಶೇ. 70ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಭಾರತವು ಅಮೃತ ಕಾಲದ ಸುವರ್ಣ ಯುಗವನ್ನು ಪ್ರವೇಶಿಸುತ್ತಿದೆ ಎಂದು ಪ್ರತಿಪಾದಿಸುತ್ತಿರುವ ಪ್ರಧಾನಿ ಮೋದಿಯು ಈ ಸಂಗತಿಗಳ ಕುರಿತು ಹೇಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬುದು ಆಸಕ್ತಿದಾಯಕವಾಗಿದೆ. ಮೋದಿಗೆ ಯಾರಾದರೂ ಒಂದು ಸರಳ, ಸಾಮಾನ್ಯ ಪ್ರಜ್ಞೆಯ ಪ್ರಶ್ನೆಯೊಂದನ್ನು ಕೇಳಬಹುದಾಗಿದೆ – ಅಮೃತ ಕಾಲದಲ್ಲಿ ಅದು ಹೇಗೆ 80 ಕೋಟಿ ಮಂದಿ ಆಹಾರ ಧಾನ್ಯಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ? ಎಂದು.