ಸಹೋದರನಿಂದ ಅತ್ಯಾಚಾರ: ಪತ್ನಿಯ ಕೊಲೆಗೆ ಪತಿ ಯತ್ನ
ಲಕ್ನೋ: ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಪತಿಯೇ ಯತ್ನಿಸುತ್ತಿರುವ ಆಘಾತಕಾರಿ ವಿಡಿಯೊ ಉತ್ತರ ಪ್ರದೇಶದ ಮುಝಫರ್ ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತಿಯ ಸಹೋದರನೇ ಅತ್ಯಾಚಾರ ಎಸಗಿದ್ದಾಗಿ ಪತಿಗೆ ಮಹಿಳೆ ಹೇಳುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಅತ್ಯಾಚಾರ ಎಸಗಿದ ವ್ಯಕ್ತಿ ಘಟನೆಯ ವಿಡಿಯೊ ಕೂಡಾ ಚಿತ್ರೀಕರಿಸಿಕೊಂಡಿದ್ದಾಗಿ ಮಹಿಳೆ ಹೇಳಿದ್ದಾರೆ.
ಪತಿ ಹೊರಕ್ಕೆ ಹೋಗಿದ್ದಾಗ ಭಾವ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತ ಮಹಿಳೆ ದೂರಿದ್ದಾರೆ. ಪತಿ ವಾಪಸ್ಸಾದಾಗ ಘಟನೆಯ ಬಗ್ಗೆ ಪತಿಗೆ ವಿವರಿಸಿದ್ದಾರೆ. ಆದರೆ ಆಗ ಪತಿಯಿಂದ ಆಘಾತಕಾರಿ ಪ್ರತಿಕ್ರಿಯೆ ಬಂದಿದ್ದು, "ನೀನು ಇನ್ನು ಮೇಲೆ ನನ್ನ ಪತ್ನಿಯಲ್ಲ,ಅತ್ತಿಗೆ" ಎಂದು ಆತ ಉದ್ಗರಿಸಿದ್ದಾನೆ.
ಮರುದಿನ ಸಂತ್ರಸ್ತ ಮಹಿಳೆಯ ಪತಿ ಹಾಗೂ ಆತನ ಸಹೋದರ ಆಕೆಯ ಕೊಠಡಿಗೆ ಬಂದಿದ್ದಾರೆ. ಪತಿ ದುಪ್ಪಟದಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ. ಆತನ ಸಹೋದರ ಘಟನೆಯನ್ನು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊವನ್ನು ಮಹಿಳೆ ಹಂಚಿಕೊಂಡ ಬಳಿಕ ಮತ್ತು ಲಿಖಿತವಾಗಿ ದೂರು ನೀಡಿದ್ದರಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪತಿ ಹಾಗೂ ಆತನ ಸಹೋದರನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376(ಅತ್ಯಾಚಾರ), 307 (ಕೊಲೆ ಯತ್ನ) ಮತ್ತು 328ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಇಬ್ಬರನ್ನೂ ಬಂಧಿಸುವ ಪ್ರಯತ್ನ ನಡೆದಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಸತ್ಯನಾರಾಯಣ ಪ್ರಜಾಪತಿ ಹೇಳಿದ್ದಾರೆ.