ಹೈದರಾಬಾದ್| ಬೀದಿ ನಾಯಿಗಳ ದಾಳಿಗೆ ಎರಡೂವರೆ ವರ್ಷದ ಮಗು ಮೃತ್ಯು
ಸಾಂದರ್ಭಿಕ ಚಿತ್ರ
ಹೈದರಾಬಾದ್: ತನ್ನ ಸಹೋದರಿಯೊಂದಿಗೆ ಆಡುತ್ತಿದ್ದ ಎರಡೂವರೆ ವರ್ಷದ ಮಗುವೊಂದು ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಘಟನೆ ಹೈದರಾಬಾದ್ ನ ಗಾಯತ್ರಿ ನಗರದಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರದೇಶವೊಂದರಲ್ಲಿ ನಡೆದಿದೆ. ಇಲ್ಲಿ ಮಗುವಿನ ಪೋಷಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ದೀಪಾಲಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀದಿ ನಾಯಿಗಳನ್ನು ಸ್ಥಳೀಯರು ಬೆದರಿಸಿ ಓಡಿಸಿದ್ದರಿಂದ ಸಂತ್ರಸ್ತ ಬಾಲಕಿಯ ಹಿರಿಯ ಸಹೋದರಿಯು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾಳೆ ಎಂದೂ ಅವರು ಹೇಳಿದ್ದಾರೆ.
ಛತ್ತೀಸ್ ಗಢ ನಿವಾಸಿಗಳಾದ ಸಂತ್ರಸ್ತ ಬಾಲಕಿಯ ಕುಟುಂಬವು ಉತ್ತಮ ಬದುಕಿಗಾಗಿ ಹೈದರಾಬಾದ್ ಗೆ ವಲಸೆ ಬಂದಿತ್ತು ಎಂದು ಹೇಳಲಾಗಿದೆ. ಇಬ್ಬರೂ ಪೋಷಕರು ದಿನಗೂಲಿಗಳು ಎಂದು ತಿಳಿದು ಬಂದಿದೆ.
ಜನರು ಬೀದಿ ನಾಯಿಗಳ ಉಪಟಳದ ಕುರಿತು ಸ್ಥಳೀಯ ಸಂಸ್ಥೆಗೆ ದೂರು ನೀಡಿದ್ದರೂ, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ತಮ್ಮ ದೂರನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ದೂರುಗಳನ್ನು ಪೊಲೀಸರು ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.