ಹೈದರಾಬಾದ್ ನ ಬಿಜೆಪಿ ಅಭ್ಯಥಿ ಮಾಧವಿ ಲತಾ ಸಂಪತ್ತು 221.37 ಕೋಟಿ ರೂ.
ಮಾಧವಿ ಲತಾ | PC : PTI
ಹೈದರಾಬಾದ್: ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು 221.37 ಕೋಟಿ ರೂ. ಮೌಲ್ಯದ ಕೌಟುಂಬಿಕ ಆಸ್ತಿಯನ್ನು ಹೊಂದಿದ್ದು, ಆ ಮೂಲಕ ತೆಲಂಗಾಣದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲೊಬ್ಬ ರೆನಿಸಿಕೊಂಡಿದ್ದಾರೆ.
ಮಾಧವಿ ಲತಾ ಹಾಗೂ ಅವರ ಪತಿ ಕೊಂಪೆಲ್ಲಾ ವಿಶ್ವನಾಥ ಇಬ್ಬರೂ ಉದ್ಯಮಿಗಳಾಗಿದ್ದಾರೆ. ಅವರನ್ನು ಅವಲಂಭಿಸಿರುವ ಮೂವರು ಮಕ್ಕಳು ಒಟ್ಟು 165.46 ಕೋಟಿ ರೂ. ಚರಾಸ್ತಿಯನ್ನು ಹೊಂದಿದ್ದಾರೆ. ದಂಪತಿಯು 55.91 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಕೂಡಾ ಹೊಂದಿದ್ದಾರೆ.
ಮಾಧವಿ ಲತಾ ಅವರು ಬುಧವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಂದರ್ಭ ತನ್ನ ಕುಟುಂಬ ಆಸ್ತಿಪಾಸ್ತಿಗಳ ವಿವರಗಳನ್ನು ಬಹಿರಂಪಡಿಸಿದ್ದಾರೆ. ಸಿಕಂದರಾಬಾದ್ ನ ನಿವಾಸಿಯಾದ ಮಾಧವಿ ಲತಾ ತೀರಾ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
25.20 ಕೋಟಿ ರೂ. ಮೊತ್ತದ ಹೂಡಿಕೆ ಹಣ ಸೇರಿದಂತೆ ತಾನು 31.31 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಮಾಧವಿ ಲತಾ ಘೋಷಿಸಿದ್ದಾರೆ. ವಿರಿಂಚಿ ಲಮಿಟೆಡ್ನಲ್ಲಿ ಅವರು 7.80 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 3.78 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಹೊಂದಿದ್ದಾರೆ.
ಮಾಧವಿ ಲತಾ ಅವರ ಪತಿ ವಿರಿಂಚಿ ಲಿಮಿಟೆಡ್ನಲ್ಲಿ 52.36 ಕೋಟಿ ರೂ ಮೌಲ್ಯದ ಶೇರುಗಳು ಸೇರಿದಂತೆ 88.31 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ ಅವರ ಮೂವರು ಮಕ್ಕಳು 45 ಕೋಟಿ ರೂ.ಗೂ ಅಧಿಕ ಚರಾಸ್ತಿಯನ್ನು ಹೊಂದಿದ್ದಾರೆ.
ಹೈದರಾಬಾದ್ ನ ಸಮುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಧವಿ ಲತಾ ಅವರು ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡ ಹಾಗೂ ವಸತಿ ಸಮುಚ್ಚಯಗಳನ್ನೂ ಹೊಂದಿದ್ದಾರೆ.