ನಾನು ಸಿಎಂ ಹುದ್ದೆಯ ಆಕಾಂಕ್ಷಿಯಲ್ಲ: ಶಿವರಾಜ್ ಸಿಂಗ್ ಚೌಹಾಣ್ ಅಚ್ಚರಿಯ ಹೇಳಿಕೆ
Photo: twitter
ಭೋಪಾಲ್: ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಯಕ್ಷಪ್ರಶ್ನೆ ಬಿಜೆಪಿ ವಲಯದಲ್ಲಿ ಸುಳಿದಾಡುತ್ತಿರುವ ನಡುವೆಯೇ, ತಾವು ಸಿಎಂ ಗಾದಿಯ ರೇಸ್ ನಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡುವ ಮುನ್ನ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ, "ನಾನು ಈ ಮೊದಲೂ ಸಿಎಂ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ; ಈಗ ಕೂಡಾ ಅಲ್ಲ" ಎಂದು ಸ್ಪಷ್ಟಪಡಿಸಿದ್ದರು.
ಕಾರ್ಯರ್ತನಾಗಿ ಪಕ್ಷ ನೀಡಿದ ಕೆಲಸವನ್ನು ನಾನು ನನ್ನ ಶಕ್ತಿ ಹಾಗೂ ಸಾಮರ್ಥ್ಯದೊಂದಿಗೆ ಅನುಷ್ಠಾನಕ್ಕೆ ತರುತ್ತೇನೆ. ಮೋದಿಯವರು ನಮ್ಮ ನಾಯಕರು. ಅವರ ಜತೆ ಕಾರ್ಯ ನಿರ್ವಹಿಸುವುದು ನನಗೆ ಯಾವಾಗಲೂ ಹೆಮ್ಮೆ ಮತ್ತು ಸಂತೋಷದ ವಿಚಾರ. ರಾಜ್ಯದ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ಯಾರನ್ನು ಕೇಂದ್ರ ನಾಯಕತ್ವ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡುತ್ತದೆ ಎಂಬ ಕುತೂಹಲದಲ್ಲಿ ಎಲ್ಲರ ಕಣ್ಣು ದೆಹಲಿಯ ಮೇಲೆ ಇರುವ ಹೊತ್ತಲ್ಲೇ ಚೌಹಾಣ್ ಅವರ ವಿಡಿಯೊ ಸಂದೇಶ ಕುತೂಹಲ ಮೂಡಿಸಿದೆ. ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಅತ್ಯುನ್ನತ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.