ಪ್ರವಾಸಿಗಳನ್ನು ರಕ್ಷಿಸಲು ಗುಂಡುಗಳಿಗೆ ಎದೆಯೊಡ್ಡಿದ್ದ ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ:ಆದಿಲ್ ತಂದೆ

ಪೀರ್ಜಾದಾ ಆದಿಲ್ ಶಾ | PTI
ಗುಲ್ಮಾರ್ಗ್(ಜಮ್ಮುಕಾಶ್ಮೀರ): ಪ್ರವಾಸಿಗಳ ಜೀವಗಳನ್ನು ಉಳಿಸಲು ಗುಂಡುಗಳಿಗೆ ಎದೆಯೊಡ್ಡಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನನ್ನ ಪುತ್ರ ಪೀರ್ಜಾದಾ ಆದಿಲ್ ಶಾ ಬಗ್ಗೆ ನನಗೆ ತುಂಬ ಹೆಮ್ಮೆಯಿದೆ;ಇದು ಆದಿಲ್ ತಂದೆ ಸೈಯದ್ ಹೈದರ್ ಶಾ ಅವರು ತನ್ನ ಮಗನ ಸಾವಿಗಾಗಿ ದುಃಖಿಸುತ್ತ ಹೇಳಿದ ಮಾತು.
ಪ್ರವಾಸಿಗಳನ್ನು ಕರೆದೊಯ್ಯುವ ಕುದುರೆ ಸವಾರರಾಗಿದ್ದ ಆದಿಲ್ ಮಂಗಳವಾರ ಮಿನಿ ಸ್ವಿಟ್ಝರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ಹೆಲ್ತ್ ರೆಸಾರ್ಟ್ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗಳ ಮೇಲೆ ದಾಳಿ ಸಂದರ್ಭದಲ್ಲಿ ಭಯೋತ್ಪಾದಕನೋರ್ವನಿಂದ ರೈಫಲ್ನ್ನು ಕಿತ್ತುಕೊಳ್ಳಲು ಪಯತ್ನಿಸುತ್ತಿದ್ದಾಗ ಮೂರು ಗುಂಡುಗಳು ಅವರ ಎದೆಯಲ್ಲಿ ತೂರಿದ್ದವು.
ಉಗ್ರರ ದಾಳಿಯಲ್ಲಿ 25 ಪ್ರವಾಸಿಗಳೂ ಮೃತಪಟ್ಟಿದ್ದು,ಈ ಘಟನೆಯು ಜಮ್ಮುಕಾಶ್ಮೀರದಲ್ಲಿ ಮತ್ತು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
‘ನಾನಿಂದು ಜೀವಂತವಾಗಿದ್ದರೆ ಪ್ರವಾಸಿಗಳನ್ನು ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನನ್ನ ಮಗನ ಬಗ್ಗೆ ನನಗಿರುವ ಹೆಮ್ಮೆಯೇ ಕಾರಣವಾಗಿದೆ. ಆತ ಚಂದದ ಯುವಕನಾಗಿದ್ದ ಮತ್ತು ಆತನನ್ನು ಮೃತಸ್ಥಿತಿಯಲ್ಲಿ ನೋಡಿ ನಾನೂ ಸಾಯುತ್ತಿದ್ದೆ,ಆದರೆ ಆತ ತೋರಿಸಿದ್ದ ಅಸಾಮಾನ್ಯ ಧೈರ್ಯ ನನಗೆ ಬದುಕಿರಲು ಧೈರ್ಯ ಮತ್ತು ಶಕ್ತಿಯನ್ನು ನೀಡಿದೆ’ ಎಂದು ಹೇಳಿದ ಶಾ, ‘ನನ್ನ ಮಗ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಪ್ರವಾಸಿಗಳ ಜೀವಗಳನ್ನುಳಿಸಿದ್ದು ನನಗೆ ಖುಷಿ ನೀಡಿದೆ. ಅವನಿಂದಾಗಿ ಕೆಲವು ಜನರು ಬದುಕುಳಿದಿದ್ದಾರೆ ಮತ್ತು ಆ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ. ಅದು ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ’ಎಂದರು.
ಆದಿಲ್ ತನ್ನ ಪೋಷಕರು,ಇಬ್ಬರು ಸೋದರರು ಮತ್ತು ಇಬ್ಬರು ಸೋದರಿಯರನ್ನು ಒಳಗೊಂಡ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದರು.
ಮಗನನ್ನು ಕೊನೆಯ ಬಾರಿ ನೋಡಿದ್ದನ್ನು ನೆನಪಿಸಿಕೊಂಡ ಶಾ,‘ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಲು ಆದಿಲ್ ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದ. ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಬೈಸರನ್ನಲ್ಲಿ ಪ್ರವಾಸಿಗಳ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿ ನಮಗೆ ಸಿಕ್ಕಿತ್ತು. ನಾವು ಅವನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆವು,ಆದರೆ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. 4:30ರ ಸುಮಾರಿಗೆ ನಾವು ಮತ್ತೆ ಕರೆ ಮಾಡಿದ್ದೆವು. ಆತನ ಫೋನ್ ರಿಂಗ್ ಆಗುತ್ತಿತ್ತು,ಆದರೆ ಅದನ್ನು ಯಾರೂ ಎತ್ತುತ್ತಿರಲಿಲ್ಲ’ ಎಂದು ತಿಳಿಸಿದರು.
‘ಕೊನೆಗೂ ಸಂಜೆ ಆರು ಗಂಟೆಗೆ ನಮಗೆ ಆದಿಲ್ ಸಾವಿನ ಸುದ್ದಿ ಸಿಕ್ಕಿತ್ತು. ನನ್ನ ಇನ್ನೋರ್ವ ಮಗ ಮತ್ತು ಸೋದರಪುತ್ರ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದರು ಮತ್ತು ನನಗೆ ಕರೆ ಮಾಡಿ ದಾಳಿಯಲ್ಲಿ ಆದಿಲ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು’ ಎಂದ ಶಾ, ‘ನಮಗೆ ನ್ಯಾಯ ಬೇಕು ಮತ್ತು ಈ ಕ್ರೂರ ಕೃತ್ಯವನ್ನು ಮಾಡಿದ ಯಾರೇ ಆಗಿರಲಿ,ಅವರಿಗೆ ಶಿಕ್ಷೆಯಾಗಬೇಕು. ದಾಳಿಯ ಹಿಂದಿದ್ದವರನ್ನು ಸುಮ್ಮನೆ ಬಿಡಬಾರದು’ ಎಂದು ಬಿಕ್ಕುತ್ತಲೇ ಹೇಳಿದರು.
►ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ:ಸೋದರಿ
‘ನನ್ನ ಸೋದರ ಅತ್ಯಂತ ವಿನಮ್ರ ಮತ್ತು ಒಳ್ಳೆಯ ಮನುಷ್ಯನಾಗಿದ್ದ. ಅವನು ಹಗಲಿನಲ್ಲಿ ಏನು ದುಡಿಯುತ್ತಿದ್ದನೋ ಅದರಿಂದ ಸಂಜೆ ನಮ್ಮ ಹೊಟ್ಟೆ ತುಂಬಿಸುತ್ತಿದ್ದ. ಆತ ನಮ್ಮ ಕುಟುಂಬದ ಏಕೈಕ ಜೀವನಾಧಾರವಾಗಿದ್ದ. ಭಯೋತ್ಪಾದಕರು ನಮ್ಮ ಜೀವನಾಧಾರವನ್ನೇ ಕಿತ್ತುಕೊಂಡಿದ್ದಾರೆ’ ಎಂದು ಆದಿಲ್ ಸೋದರಿ ಅಸ್ಮತ್ ಹೇಳಿದರು.
‘ನಮ್ಮ ಕುಟುಂಬದ ಭವಿಷ್ಯವು ಈಗ ಕತ್ತಲೆಯಿಂದ ತುಂಬಿದೆ. ಇತರರನ್ನು ರಕ್ಷಿಸಲು ನನ್ನ ಸೋದರ ತನ್ನ ಜೀವವನ್ನೇ ನೀಡಿದ. ನಾವು ಈಗ ಏನು ಮಾಡಬೇಕು?’ ಎಂದು ಬಿಕ್ಕುತ್ತಿದ್ದ ಅಸ್ಮತ್ ಪ್ರಶ್ನಿಸಿದರು.
►ಸಾರ್ವಜನಿಕ ಬೆಂಬಲ,ಸಂತಾಪಗಳ ಮಹಾಪೂರ
ಶಾ ಕುಟುಂಬಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಲು ಜನರು ಭಾರೀ ಸಂಖ್ಯೆಯಲ್ಲಿ ತಮ್ಮ ಹಿರೋ ಆದಿಲ್ ಮನೆಗೆ ಭೇಟಿ ನೀಡುತ್ತಿದ್ದಾರೆ. ಬುಧವಾರ ಪಹಲ್ಗಾಮ್ನ ಸ್ವಗ್ರಾಮದಲ್ಲಿ ಆದಿಲ್ ಅಂತ್ಯಸಂಸ್ಕಾರ ನೆರವೇರಿದ್ದು, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸೇರಿದಂತೆ ಸಾವಿರಾರು ಜನರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.