ಜನರಿಗೆ ನೆರವಾಗಲು ಮಣಿಪುರಕ್ಕೆ ಬಂದಿದ್ದೇನೆ, ರಾಜಕೀಯ ಮಾಡಲಲ್ಲ: DCW ಅಧ್ಯಕ್ಷೆ
ಪ್ರಧಾನಿ ಮೋದಿ ಭೇಟಿಗೆ ಆಗ್ರಹ
Swati Maliwal | Photo: ANI
ಇಂಫಾಲ: ತಾನು ಜನರಿಗೆ ನೆರವಾಗಲು ಮಣಿಪುರಕ್ಕೆ ಬಂದಿದ್ದೇನೆ ಎಂದು ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ (DCW) ಸ್ವಾತಿ ಮಲಿವಾಲ್ ಅವರು ರವಿವಾರ ಇಲ್ಲಿ ಹೇಳಿದರು. ಜನರ ಸಂಕಷ್ಟಗಳನ್ನು ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಆಗ್ರಹಿಸಿದ ಮಲಿವಾಲ್,ತಾನಿಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಈ ಸಂಕಷ್ಟ ಸಮಯದಲ್ಲಿ ಇಲ್ಲಿರಬೇಕಾದವರು ರಾಜ್ಯಕ್ಕೆ ಭೇಟಿ ನೀಡಿದರೆ ತಾನು ದಿಲ್ಲಿಗೆ ಮರಳುವುದಾಗಿ ಹೇಳಿದರು.
ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಳೆದ ಮೂರು ತಿಂಗಳುಗಳಿಂದಲೂ ಹಿಂಸಾಚಾರದಿಂದ ತಾವು ಪೀಡಿತರಾಗಿದ್ದೇವೆ ಎಂದು ಈಗಾಗಲೇ ರಾಜ್ಯದ ಮಹಿಳೆಯರು ತನ್ನನ್ನು ಸಂಪರ್ಕಿಸಿದ್ದಾರೆ ಎಂದರು.
ಮಣಿಪುರಕ್ಕೆ ಭೇಟಿ ನೀಡಲು ರಾಜ್ಯ ಸರಕಾರವು ತನಗೆ ಅನುಮತಿಯನ್ನು ನಿರಾಕರಿಸಿದೆಯಾದರೂ ತಾನು ಅಲ್ಲಿಗೆ ಭೇಟಿ ನೀಡಲಿದ್ದೇನೆ ಎಂದು ಇದಕ್ಕೂ ಮುನ್ನ ಮಲಿವಾಲ್ ಘೋಷಿಸಿದ್ದರು.
‘ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರೊಂದಿಗೆ ತುರ್ತು ಭೇಟಿಗೆ ಅವಕಾಶ ಕೋರಿ ನಾನು ಅವರಿಗೆ ಪತ್ರವನ್ನು ಬರೆದಿದ್ದೇನೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ನನ್ನ ಭೇಟಿಯನ್ನು ಮುಂದೂಡುವಂತೆ ಮಣಿಪುರ ಸರಕಾರವು ನನಗೆ ಶಿಫಾರಸು ಮಾಡಿತ್ತು. ಅದರ ಸಲಹೆಯನ್ನು ಪರಿಶೀಲಿಸಿದ ಬಳಿಕ ಯೋಜಿಸಿದ್ದಂತೆ ಮಣಿಪುರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ. ರಾಜ್ಯದಲ್ಲಿಯ ಮಾನವ ಹಕ್ಕು ಉಲ್ಲಂಘನೆಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಸಮಯವನ್ನು ಕೋರಿದ್ದೇನೆ. ಲೈಂಗಿಕ ದೌರ್ಜನ್ಯ ಸಂತ್ರಸ್ತರ ಭೇಟಿಗಾಗಿ ನನ್ನೊಂದಿಗೆ ಬರುವಂತೆ ಅವರಿಗೆ ಮನವಿ ಮಾಡಿಕೊಂಡಿದ್ದೇನೆ ’ ಎಂದು ಮಲಿವಾಲ್ ರವಿವಾರ ಟ್ವೀಟಿಸಿದ್ದರು.
ಸಿಂಗ್ ಅವರಿಗೆ ತಾನು ಬರೆದಿರುವ ಪತ್ರದ ಪ್ರತಿಯನ್ನೂ ಮಲಿವಾಲ್ ರವಿವಾರ ಶೇರ್ ಮಾಡಿಕೊಂಡಿದ್ದಾರೆ. ರಾಜ್ಯ ಸರಕಾರಕ್ಕೆ ಸಮಸ್ಯೆಯನ್ನು ಸೃಷ್ಟಿಸುವ ಏನನ್ನೂ ತಾನು ಮಾಡುವುದಿಲ್ಲ ಎಂದು ಪತ್ರದಲ್ಲಿ ಖಚಿತಪಡಿಸಿರುವ ಅವರು,ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಉಳಿದುಕೊಂಡಿರುವ ಪರಿಹಾರ ಶಿಬಿರಗಳಿಗೆ ತನ್ನ ಭೇಟಿಗೆ ಸಹಕರಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.