"ನಾನಿನ್ನು ಕವನ ಬರೆಯಲಾರೆ..." : ಇಸ್ರೇಲ್ ಆಕ್ರಮಣ ಖಂಡಿಸಿ ನ್ಯೂಯಾರ್ಕ್ ಟೈಮ್ಸ್ ಗೆ ರಾಜೀನಾಮೆ ನೀಡಿದ ಪತ್ರಕರ್ತೆ
ಆ್ಯನೆ ಬೋಯರ್, Photo cradit : lithub.com
ನ್ಯೂಯಾರ್ಕ್: ಫೆಲೆಸ್ತೀನ್ ಮೇಲಿನ ಇಸ್ರೇಲ್ ಆಕ್ರಮಣ ಮುಂದುವರಿದಿರುವ ನಡುವೆಯೇ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಕವನ ವಿಭಾಗದ ಸಂಪಾದಕಿ ಆ್ಯನೆ ಬೋಯರ್ ಬರೆದಿರುವ ಅಸಾಧಾರಣ ರಾಜೀನಾಮೆ ಪತ್ರವು ವಿಶ್ವಾದ್ಯಂತ ವೈರಲ್ ಆಗಿದೆ. ಅಮೆರಿಕಾ ಬೆಂಬಲಿತ ಇಸ್ರೇಲ್ ಆಕ್ರಮಣವನ್ನು ಕಟು ಮಾತುಗಳಲ್ಲಿ ಟೀಕಿಸಿರುವ ಆ್ಯನೆ, ಗಾಝಾ ಮೇಲೆ ನಡೆಯುತ್ತಿರುವ ಅಮೆರಿಕಾ ಬೆಂಬಲಿತ ಆಕ್ರಮಣವು ಯಾರೊಬ್ಬರ ಒಳಿತಾಗಿಯೂ ನಡೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅವರ ರಾಜೀನಾಮೆ ಪತ್ರದ ಸಂಕ್ಷಿಪ್ತ ಸಾರಾಂಶ ಹೀಗಿದೆ:
"ನಾನು ನ್ಯೂಯಾರ್ಕ್ ಟೈಮ್ಸ್ ನಿಯತಕಾಲಿಕದ ಕವನ ವಿಭಾಗದ ಸಂಪಾದಕಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ.
ಗಾಝಾ ಜನರ ವಿರುದ್ಧ ನಡೆಯುತ್ತಿರುವ ಅಮೆರಿಕಾ ಬೆಂಬಲಿತ ಇಸ್ರೇಲ್ ಆಕ್ರಮಣವು ಯಾರ ಒಳಿತಿಗಾಗಿಯೂ ನಡೆಯುತ್ತಿಲ್ಲ. ಅದರಲ್ಲಿ ಯಾವುದೇ ಸುರಕ್ಷತೆಯೂ ಇಲ್ಲ ಅಥವಾ ಸುರಕ್ಷತೆಯನ್ನೂ ನೀಡುವುದಿಲ್ಲ. ಇಸ್ರೇಲ್ಗಾಗಲಿ, ಅಮೆರಿಕಾಗಾಗಲಿ, ಯೂರೋಪ್ ಒಕ್ಕೂಟಕ್ಕಾಗಲಿ ಅಥವಾ ವಿಶೇಷವಾಗಿ ಯಹೂದಿಗಳನ್ನು ನಿಂದಿಸಿದ್ದವರೇ ಅವರ ಪರವಾಗಿ ಹೋರಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವವರಿಂದ ಅವರಲ್ಲಿನ ಬಹುತೇಕರಿಗಾಗಲಿ ಸುರಕ್ಷತೆ ದೊರೆಯುವುದಿಲ್ಲ. ಆದರೆ ಈ ಆಕ್ರಮಣದಲ್ಲಿ ಅಡಗಿರುವ ಮಾರಣಾಂತಿಕ ಲಾಭವೆಂದರೆ, ಅದು ತೈಲ ಹಿತಾಸಕ್ತಿ ಹಾಗೂ ಶಸ್ತ್ರಾಸ್ತ್ರ ತಯಾರಕರದ್ದು.
ಹೀಗಾಗಿ, ನಾನು ಕವನ ಬರೆಯಲು ನಿರಾಕರಿಸುತ್ತೇನೆ. ನಮ್ಮನ್ನು ಅಕಾರಣ ಸಂಕಷ್ಟಕ್ಕೆ ದೂಡುವ ಗುರಿ ಹೊಂದಿರುವವರ ಸಕಾರಣ ನಿದರ್ಶನಗಳಿರುವಾಗ ನಾನು ಕವನ ಬರೆಯಲಾರೆ. ಘೋರ ಸೌಹಾರ್ದತೆ ಬಗ್ಗೆ ಇನ್ನು ಮುಂದೆ ಬರೆಯಲಾರೆ. ಇನ್ನು ಮುಂದೆ ಶುಚಿಗೊಳಿಸಿದ ನರಕದಂಥ ಪದಗಳನ್ನು ಬಳಸಲಾರೆ. ಇನ್ನು ಮುಂದೆ ಯುದ್ಧದಾಹಿ ಸುಳ್ಳುಗಳನ್ನು ಹೇಳಲಾರೆ.
ಈ ರಾಜೀನಾಮೆಯು ಸುದ್ದಿಯೊಳಗೆ ಕವನದ ಗಾತ್ರದಲ್ಲಿ ಪ್ರಕಟವಾಗುತ್ತದೆ. ಅದೇ ಈ ಹೊತ್ತಿನ ನೈಜ ಗಾತ್ರ ಕೂಡಾ."
-ಆ್ಯನೆ ಬೋಯರ್