ನೊಬೆಲ್ ಸಿಗದಿದ್ದರೆ ಜೀವನ ವ್ಯರ್ಥವಾಗುತ್ತಿತ್ತು ಎಂದು ನಾನು ಭಾವಿಸಿಲ್ಲ : ಅಮರ್ತ್ಯ ಸೇನ್
ಅಮರ್ತ್ಯ ಸೇನ್
ಬೋಲಪುರ (ಪಶ್ಚಿಮ ಬಂಗಾಳ ) : ತಾನು ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದು ಸಂತಸದ ವಿಷಯ ಎಂದು ಬಣ್ಣಿಸಿರುವ ಚಿಂತಕ-ತತ್ವಜ್ಞಾನಿ-ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರು, ನೊಬೆಲ್ ಪ್ರಶಸ್ತಿಯನ್ನು ಪಡೆಯದಿದ್ದರೂ ತನ್ನ ಜೀವನವು ವ್ಯರ್ಥವಾಗುತ್ತಿರಲಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಪ್ರಶಸ್ತಿಯಿಂದ ಲಭಿಸಿದ್ದ ಹಣ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಕೇಂದ್ರೀಕರಿಸುವ ಸಂಶೋಧನಾಧಾರಿತ ದತ್ತಿ ಸಂಸ್ಥೆ ಪ್ರತೀಚಿ ಟ್ರಸ್ಟನ್ನು ಆರಂಭಿಸಲು ತನಗೆ ನೆರವಾಗಿತ್ತು ಎಂದು ಪಶ್ಚಿಮ ಬಂಗಾಳದ ವೀರಭೂಮ್ ಜಿಲ್ಲೆಯ ಬೋಲಪುರದಲ್ಲಿಯ ತನ್ನ ಪೂರ್ವಜರ ನಿವಾಸದಲ್ಲಿ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೇನ್ ತಿಳಿಸಿದರು.
‘ನೀವು ಈ ಬಹುಮಾನಗಳನ್ನು ಗೆಲ್ಲುತ್ತೀರೋ ಇಲ್ಲವೋ ಎನ್ನುವುದರಲ್ಲಿ ಅದೃಷ್ಟದ ಪಾಲೂ ಕೊಂಚ ಇದೆ. ನೊಬೆಲ್ ಅಥವಾ ಇನ್ಯಾವುದೇ ಬಹುಮಾನವನ್ನು ಪಡೆಯುವ ಗುರಿಯನ್ನು ನಾನು ಹೊಂದಿದ್ದೆ ಎಂದು ನಾನು ಭಾವಿಸುವುದಿಲ್ಲ’ ಎಂದು 1998ರಲ್ಲಿ ನೊಬೆಲ್ ಅರ್ಥಶಾಸ್ತ್ರ ಬಹುಮಾನಕ್ಕೆ ಭಾಜನರಾಗಿದ್ದ ಸೇನ್ ಹೇಳಿದರು.
‘ನೊಬೆಲ್ ಪ್ರಶಸ್ತಿಯು ನನ್ನನ್ನರಸಿ ಬಂದಿದ್ದು ವಿಶೇಷವಾಗಿ ಭಾರತ ಮತ್ತು ಬಾಂಗ್ಲಾದೇಶಗಳನ್ನು ಗುರಿಯಾಗಿಸಿಕೊಂಡು ಸಾಕ್ಷರತೆ,ಮೂಲಭೂತ ಆರೋಗ್ಯ ರಕ್ಷಣೆ ಮತ್ತು ಲಿಂಗ ಸಮಾನತೆ ಸೇರಿದಂತೆ ನನ್ನ ಹಳೆಯ ಗೀಳುಗಳ ಬಗ್ಗೆ ತಕ್ಷಣ ಮತ್ತು ಪ್ರಾಯೋಗಿಕವಾಗಿ ಏನಾದರೂ ಮಾಡಲು ನನಗೆ ಅವಕಾಶವನ್ನು ಒದಗಿಸಿತ್ತು. ಈ ಸಮಸ್ಯೆಗಳ ಅಗಾಧ ಪ್ರಮಾಣಕ್ಕೆ ಹೋಲಿಸಿದರೆ ಬಹುಮಾನದ ಭಾಗಶಃ ಹಣದ ನೆರವಿನಿಂದ ನಾನು ಸ್ಥಾಪಿಸಿದ ಪ್ರತೀಚಿ ಟ್ರಸ್ಟ್ ಒಂದು ಸಣ್ಣ ಪ್ರಯತ್ನವಾಗಿದೆ. ಆದರೆ 50 ವರ್ಷಗಳ ಹಿಂದೆ ಶಾಂತಿನಿಕೇತನ ಸಮೀಪದ ಗ್ರಾಮಗಳಲ್ಲಿ ಸಂಜೆ ಶಾಲೆಗಳನ್ನು ನಡೆಸುತ್ತಿದ್ದ ಹಳೆಯ ಉತ್ಸಾಹವನ್ನು ಮರುಅನುಭವಿಸಲು ಸಂತೋಷವಾಗುತ್ತದೆ ’ಎಂದು ಸೇನ್ ಪ್ರತೀಚಿಯ ವೆಬ್ಸೈಟ್ನಲ್ಲಿ ಹೇಳಿದ್ದಾರೆ.
ತನ್ನ ಬಾಲ್ಯವನ್ನು ನೆನಪಿಸಿಕೊಂಡ ಭಾರತರತ್ನ ಸೇನ್,‘ನಾನು ಶಾಂತಿನಿಕೇತನದಲ್ಲಿ ಜನಿಸಿದ್ದೆ. ಆದರೆ ನಮ್ಮ ಕುಟುಂಬ ಢಾಕಾದಲ್ಲಿದ್ದರಿಂದ ಅಲ್ಲಿಯೇ ಬೆಳೆದಿದ್ದೆ. ನನ್ನ ತಂದೆ ಅಶುತೋಷ ಸೇನ್ ಢಾಕಾ ವಿವಿಯಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಏಳನೇ ವಯಸ್ಸಿಗೆ ನಾನು ಢಾಕಾದಿಂದ ಇಲ್ಲಿಗೆ ಬಂದು ನನ್ನ ಅಜ್ಜ-ಅಜ್ಜಿ ಜೊತೆ ಉಳಿದುಕೊಂಡು ರವೀಂದ್ರನಾಥ ಟಾಗೋರ್ ಅವರು ಸ್ಥಾಪಿಸಿದ್ದ ಪಥ ಭವನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ್ದೆ. ರಜೆಯ ದಿನಗಳಲ್ಲಿ ಢಾಕಾಕ್ಕೆ ಹೋಗುತ್ತಿದ್ದೆ ’ ಎಂದು ಮೆಲುಕು ಹಾಕಿದರು.