ಇಂಥದ್ದೊಂದು ಚುನಾವಣೆ ಇನ್ನೆಂದೂ ನೋಡಲಾರೆ ಅನಿಸುತ್ತದೆ: ಹೇಮಂತ್ ಸೊರೇನ್
ಹೇಮಂತ್ ಸೊರೇನ್ | PTI
ರಾಂಚಿ : ಜಾರ್ಖಂಡ್ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚ (ಜೆಎಮ್ಎಮ್) ನಾಯಕ ಹೇಮಂತ್ ಸೊರೇನ್ ಮುಖ್ಯಮಂತ್ರಿಯಾಗಿ ಮರಳಲು ವೇದಿಕೆ ಸಿದ್ಧವಾಗಿದೆ. ರಾಜ್ಯ ವಿಧಾನಸಭೆಯ 81 ಸ್ಥಾನಗಳ ಪೈಕಿ 57ರಲ್ಲಿ ಜೆಎಮ್ಎಮ್ ನೇತೃತ್ವದ ಮೈತ್ರಿಕೂಟ ವಿಜಯ ಸಾಧಿಸಿದೆ.
ಹೇಮಂತ್ ಸೊರೇನ್ರನ್ನು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜೈಲಿಗೆ ಹಾಕಲಾಗಿತ್ತು. ಅವರು ಜನವರಿ 31 ಮತ್ತು ಜೂನ್ 28ರ ನಡುವೆ 149 ದಿನಗಳ ಕಾಲ ಜೈಲಿನಲ್ಲಿದ್ದರು.
ಜಾರ್ಖಂಡ್ 2000ದಲ್ಲಿ ಸ್ಥಾಪನೆಯಾದ ಬಳಿಕ, ವಿಜಯಿ ಮೈತ್ರಿಕೂಟವೊಂದು ಅತಿ ಹೆಚ್ಚು ಸ್ಥಾನಗಳನ್ನು ಈ ಬಾರಿ ಗಳಿಸಿದೆ. ಚುನಾವಣಾ ವಿಜಯದ ಸಂದರ್ಭದಲ್ಲಿ ಮಾತನಾಡಿದ ಹೇಮಂತ್ ಸೊರೇನ್, ಮೈತ್ರಿಕೂಟದ ಯಶಸ್ಸಿನ ಶ್ರೇಯವನ್ನು ಪತ್ನಿ ಕಲ್ಪನಾ ಸೊರೇನ್ ಮತ್ತು ತನ್ನ ತಂಡಕ್ಕೆ ನೀಡಿದರು.
ಇಂಥದ್ದೊಂದು ಕಠಿಣ ಚುನಾವಣೆಯನ್ನು ನಾನು ಇನ್ನೆಂದೂ ನೋಡಲಾರೆ ಎಂದನಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೇಮಂತ್ ಸೊರೇನ್ ಅಭಿಪ್ರಾಯಪಟ್ಟರು.
‘‘ಚುನಾವಣಾ ಸಂದರ್ಭದಲ್ಲಿ ಅಗಾಧ ಒತ್ತಡವಿತ್ತು. ನಾನು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಷಣಗಳನ್ನು ಮಾಡುವಾಗ ನನ್ನ ಒಳಗಿನಿಂದ ರಕ್ತ ಹೊರಗೆ ಬಸಿಯುತ್ತಿರುವಂತೆ ಅನಿಸುತ್ತಿತ್ತು. ಈ ಚುನಾವಣೆ ಅಷ್ಟೊಂದು ಕಠಿಣವಾಗಿತ್ತು. ಇಂಥದ್ದೊಂದು ಕಠಿಣ ಹಾಗೂ ಒತ್ತಡದ ಚುನಾವಣೆಯನ್ನು ನಾನು ಈವರೆಗೆ ನೋಡಿಲ್ಲ, ಮುಂದೆಯೂ ನೋಡಲಾರೆ ಅನಿಸುತ್ತದೆ’’ ಎಂದು ಅವರು ನುಡಿದರು.
‘‘ನಾವು ಪೂರ್ವ ತಯಾರಿ ನಡೆಸಿ ನಮ್ಮ ಗುರಿಗಳನ್ನು ಸಿದ್ಧಪಡಿಸಿದ್ದೆವು. ಈ ಚುನಾವಣೆಯು ಅತ್ಯಂತ ಕಠಿಣ ಹೋರಾಟವಾಗಿರುತ್ತದೆ ಎನ್ನುವುದು ನಮಗೆ ಗೊತ್ತಿತ್ತು. ಹಾಗಾಗಿ, ತಳಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಲು ನಾವು ನಮ್ಮ ತಂಡದೊಂದಿಗೆ ಹೊರಟೆವು. ನಾವು ಯಾವ ಸಂದೇಶವನ್ನು ಕೊಡಲು ಬಯಸಿದೆವೋ ಅದನ್ನು ಕೊಟ್ಟೆವು. ಅದೊಂದು ಶ್ರೇಷ್ಠ ತಂಡವಾಗಿ ನಡೆಸಿದ ಪ್ರಯತ್ನವಾಗಿತ್ತು’’ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಳಿದರು.