“ನಾನು ನಿಮ್ಮ ನಾಯಕನಿಗೂ ಸವಾಲು ಹಾಕುತ್ತೇನೆ..”: ರಾಹುಲ್ ಗಾಂಧಿಗೆ ಪಂಥಾಹ್ವಾನ ನೀಡಿದ ಉವೈಸಿ
Photo: twitter.com/aimim_national
ಹೈದರಾಬಾದ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ನಿಂದ ಸ್ಪರ್ಧಿಸುವ ಬದಲು ಹೈದರಾಬಾದ್ ನಿಂದ ಸ್ಪರ್ಧಿಸಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ರವಿವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಸವಾಲು ಹಾಕಿದ್ದಾರೆ ಎಂದು ndtv.com ವರದಿ ಮಾಡಿದೆ.
ತಮ್ಮ ಸ್ವಕ್ಷೇತ್ರವಾದ ಹೈದರಾಬಾದ್ ನಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯು ಧ್ವಂಸಗೊಂಡಿದ್ದೇ ಪುರಾತನ ಪಕ್ಷವಾದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಂದು ಉವೈಸಿ ಹೇಳಿದ್ದಾರೆ.
“ನಾನು ನಿಮ್ಮ ನಾಯಕ ರಾಹುಲ್ ಗಾಂಧಿಗೆ ವಯನಾಡ್ ಬದಲು ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಸವಾಲು ಹಾಕುತ್ತಿದ್ದೇನೆ. ನೀವು ದೊಡ್ಡ ಹೇಳಿಕೆಗಳನ್ನು ನೀಡುತ್ತೀರಿ, ಆದರೆ, ಮೈದಾನಕ್ಕಿಳಿದು ನನ್ನ ವಿರುದ್ಧ ಹೋರಾಡಿ. ಕಾಂಗ್ರೆಸ್ ಪಕ್ಷದ ಜನರು ದೊಡ್ಡ ಸಂಗತಿಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ನಾನು ಸಿದ್ಧನಿದ್ದೇನೆ. ಬಾಬ್ರಿ ಮಸೀದಿ ಹಾಗೂ ಸೆಕ್ರೆಟರಿಯಟ್ ಮಸೀದಿ ಧ್ವಂಸಗೊಂಡಿದ್ದೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ..” ಎಂದು ಉವೈಸಿ ವಾಗ್ದಾಳಿ ನಡೆಸಿದ್ದಾರೆ.
ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಐಎಂಐಎಂ ನಡುವೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷಗಳು ತಮ್ಮ ಗುರಿಯನ್ನು ತಲುಪಲು ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿವೆ.