ಐಎಎಫ್ ಸ್ಕ್ವಾಡ್ರನ್ ಲೀಡರ್ ಮನೀಷಾ ಪಾಡಿ ದೇಶದ ಮೊದಲ ಮಹಿಳಾ ಎಡಿಸಿಯಾಗಿ ನೇಮಕ
ಮನೀಷಾ ಪಾಡಿ | Photo: @brahmanShila\ X
ಹೊಸದಿಲ್ಲಿ: ಭಾರತೀಯ ವಾಯು ಪಡೆ (IAF)ಯ 2015ರ ಬ್ಯಾಚಿನ ಸ್ಕ್ವಾಡ್ರನ್ ಲೀಡರ್ ಒಡಿಶಾದ ಮನೀಷಾ ಪಾಡಿ ಅವರು ಭಾರತದ ಮೊದಲ ಮಹಿಳೆ ಎಯ್ಡ್-ಡಿ-ಕ್ಯಾಂಪ್ (ADC) ಆಗಿ ನೇಮಕರಾಗಿದ್ದಾರೆ.
ಮಿಜೊರಾಂನ ರಾಜ್ಯಪಾಲ ಡಾ. ಹರಿ ಬಾಬು ಕಂಬಂಪತಿ ಅವರು ಮನೀಷಾ ಪಾಡಿ ಅವರನ್ನು ತನ್ನ ಎಡಿಸಿಯಾಗಿ ಬುಧವಾರ ನೇಮಕ ಮಾಡಿದ್ದಾರೆ. ಬೆಹ್ರಾಮ್ಪುರದ ಪಾಡಿ ಅವರು ಪ್ರಸಕ್ತ ಐಎಎಫ್ ನ ಸ್ಕ್ವಾಡ್ರನ್ ಲೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಮುಖ ಹುದ್ದೆಯೊಂದಕ್ಕೆ ಪಾಡಿ ಅವರನ್ನು ಅಧಿಕಾರಿಯನ್ನಾಗಿ ನೇಮಕ ಮಾಡುತ್ತಿರುವ ವೀಡಿಯೊವನ್ನು ರಾಜ್ಯಪಾಲ ಕಂಬಂಪತಿ ಅವರು ತನ್ನ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ಮಿಜೊರಾಂ ರಾಜ್ಯಪಾಲರಿಗೆ ಎಯ್ಡ್-ಡಿ-ಕ್ಯಾಂಪ್ ಆಗಿ ನೇಮಕವಾಗಿರುವ ಸ್ತ್ವಾಡ್ರನ್ ಲೀಡರ್ ಮನೀಷಾ ಪಾಡಿ ಅವರಿಗೆ ಅಭಿನಂದನೆಗಳು. ಸ್ತ್ವಾಡ್ರನ್ ಲೀಡರ್ ಮನೀಷಾ ಅವರು ಈ ದೇಶದ ರಾಜ್ಯಪಾಲರಿಗೆ ಏಯ್ಡ್-ಡಿ-ಕ್ಯಾಂಪ್ (ADC) ಆಗಿ ನೇಮಕವಾಗಿರುವ ಭಾರತೀಯ ವಾಯು ಪಡೆಯ ಮೊದಲ ಮಹಿಳಾ ಅಧಿಕಾರಿ. ಅವರಿಗೆ ನನ್ನ ಅಭಿನಂದನೆ’’ ಎಂದು ರಾಜ್ಯಪಾಲರು ‘ಎಕ್ಸ್’ನಲ್ಲಿ ಬರೆದಿದ್ದಾರೆ.