“ದಲಿತನೆಂಬ ಕಾರಣಕ್ಕೆ ಕಿರುಕುಳ”; ಜಮ್ಮು ಕಾಶ್ಮೀರ ಆಡಳಿತದ ವಿರುದ್ಧ ದೂರು ನೀಡಿದ ಹಿರಿಯ ಐಎಎಸ್ ಅಧಿಕಾರಿ
ಅಶೋಕ್ ಪರ್ಮಾರ್ (Photo: NDTV)
ಶ್ರೀನಗರ: ತಾನು ದಲಿತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತವು ತನಗೆ ಕಿರುಕುಳ ಹಾಗೂ ಬೆದರಿಕೆ ಒಡ್ಡುತ್ತಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಪರ್ಮಾರ್ ಆರೋಪಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿರುವ ಈ ಅಧಿಕಾರಿ ಕಳೆದ ಒಂದು ವರ್ಷ ಅವಧಿಯಲ್ಲಿ ಐದು ಬಾರಿ ವರ್ಗಾವಣೆಗೊಂಡಿದ್ದಾರೆ. ತಮ್ಮ ವಿರುದ್ಧ ಸಂಚು ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅವರ ಆರೋಪಗಳ ಕುರಿತು ತನಿಖೆಗೆ ವಿಪಕ್ಷಗಳು ಆಗ್ರಹಿಸಿವೆ.
1992 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಅಶೋಕ್ ಪರ್ಮಾರ್ ಅವರು ಗುಜರಾತ್ ರಾಜ್ಯದವರಾಗಿದ್ದಾರೆ. ತಮಗೆ ಜಮ್ಮು ಕಾಶ್ಮೀರ ಆಡಳಿತ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ಜಲ ಶಕ್ತಿ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಅವ್ಯವಹಾರಗಳನ್ನುಬಯಲಿಗೆಳೆದಿರುವುದಕ್ಕೆ ತಮ್ಮನ್ನು ಬೆದರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿಗೂ ಅವರು ಪತ್ರ ಬರೆದಿದ್ದಾರೆ ಹಾಗೂ ಆಡಳಿತ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಹುದೆಂಬ ಭಯ ವ್ಯಕ್ತಪಡಿಸಿದ್ದಾರೆ.
ತನ್ನನ್ನು ಎರಡು ಉನ್ನತ ಮಟ್ಟದ ಸಭೆಗಳಿಂದ ಹೊರಹಾಕಲಾಯಿತು ಹಾಗೂ ಇತರ ಅಧಿಕಾರಿಗಳ ಎದುರು ಅವಮಾನಿಸಲಾಗಿದೆ ಎಂದು ತಮ್ಮ ಪತ್ರದಲ್ಲಿ ಪರ್ಮಾರ್ ಆರೋಪಿಸಿದ್ದಾರೆ.
ಕೇಂದ್ರ ಡೆಪ್ಯುಟೇಶನ್ನಲ್ಲಿದ್ದ ಪರ್ಮಾರ್ ಅವರನ್ನು ಮಾರ್ಚ್ 2022 ರಲ್ಲಿ ಎಜಿಎಂಯುಟಿ ಕೇಡರ್ಗೆ ಮರುಕಳುಹಿಸಲಾಗಿತ್ತು ಹಾಗೂ ನಂತರ ಅವರು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದರು.
ಮೇ 5, 2022ರಂದು ಅವರನ್ನು ಜಲ ಶಕ್ತಿ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಅಲ್ಲಿ ಹಗರಣಗಳನ್ನು ಅವರು ಬಯಲಿಗೆಳೆದ ನಂತರ ತಿಂಗಳುಗಳೊಗೆ ಅವರನ್ನು ಎಆರ್ಐ ಮತ್ತು ತರಬೇತಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.
ಜುಲೈ 18ರಂದು ಅವರನ್ನು ಕೌಶಲ್ಯಗಳ ಇಲಾಖೆಗೆ ವರ್ಗಾಯಿಸಲಾದರೆ ಎರಡೇ ವಾರಗಳಲ್ಲಿ ಮತ್ತೆ ವರ್ಗಾವಣೆ ಆದೇಶ ಪಡೆದ ಅವರನ್ನು ಜಮ್ಮು ಕಾಶ್ಮೀರದ ಬ್ಯುರೋ ಆಫ್ ಪಬ್ಲಿಕ್ ಎಂಟರ್ಪ್ರೈಸಸ್ ಇದರ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಅಧಿಕಾರಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.