ಜಾರ್ಖಂಡ್ | ಟೆಂಡರ್ ಕಮಿಷನ್ ಹಗರಣ ; ಈಡಿ ವಿಚಾರಣೆಗೆ ಹಾಜರಾದ ಐಎಎಸ್ ಅಧಿಕಾರಿ
Photo Credit: PTI
ರಾಂಚಿ : ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಮಂಗಳವಾರ ಜಾರ್ಖಂಡ್ನ ಹಿರಿಯ ಐಎಎಸ್ ಅಧಿಕಾರಿ ಮನೀಶ್ ರಂಜನ್ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗಿರ್ ಆಲಂ ಅವರನ್ನು ಇತ್ತೀಚೆಗೆ ಬಂಧಿಸಿದ ಟೆಂಡರ್ ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ರಂಜನ್ ಕೂಡ ತನಿಖೆ ಎದುರಿಸುತ್ತಿದ್ದಾರೆ.
ರಂಜನ್ ಅವರು ಜಾರಿ ನಿರ್ದೇಶನಾಲಯ(ಈಡಿ) ಕಚೇರಿಗೆ ಬೆಳಿಗ್ಗೆ 11.15 ಗಂಟೆಗೆ ಹಾಜರಾದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿರುವ ಅವರು ಪ್ರಸ್ತುತ ಭೂಮಿ, ರಸ್ತೆ ಮತ್ತು ಕಟ್ಟಡ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ.
ಈ ಹಿಂದೆ ಮೇ 24ರಂದು ಹಾಜರಾಗಲು ಅವರಿಗೆ ಸಮನ್ಸ್ ಜಾರಿಯಾಗಿದ್ದರೂ ಅವರು ಹಾಜರಾಗಿರಲಿಲ್ಲ ಹಾಗೂ ಸಮಯಾವಕಾಶ ಜೋರಿದ್ದರು.
ಈ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾಗಿರುವ ಆಲಂ ಹೊರತಾಗಿ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಕುಮಾರ್ ಲಾಲ್ ಮತ್ತು ಸಚಿವರ ಮನೆಕೆಲಸದ ಜಹಾಂಗೀರ್ ಆಲಂ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಸಚಿವರ ಮನೆಯಿಂದ ಒಟ್ಟು ರೂ 37.5 ಕೋಟಿ ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ(ಈಡಿ) ಹೇಳಿದೆ.