ಐಸಿಸಿ ಏಕದಿನ ರ್ಯಾಂಕಿಂಗ್ | ಐದನೇ ಸ್ಥಾನಕ್ಕೇರಿದ ದೀಪ್ತಿ ಶರ್ಮಾ
ದೀಪ್ತಿ ಶರ್ಮಾ | PTI
ಹೊಸದಿಲ್ಲಿ : ಸ್ವದೇಶದಲ್ಲಿ ಇತ್ತೀಚೆಗೆ ನಡೆದಿದ್ದ ವೆಸ್ಟ್ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಆಫ್-ಸ್ಪಿನ್ನರ್ ದೀಪ್ತಿ ಶರ್ಮಾ ಮಹಿಳೆಯರ ಏಕದಿನ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.
665 ರೇಟಿಂಗ್ ಪಾಯಿಂಟ್ಸ್ನೊಂದಿಗೆ ದೀಪ್ತಿ ಸದ್ಯ 5ನೇ ರ್ಯಾಂಕಿನಲ್ಲಿದ್ದು, ದಕ್ಷಿಣ ಆಫ್ರಿಕಾದ ಮರಿಝಾನೆ ಕಾಪ್ಗಿಂತ ಸ್ವಲ್ಪ ಹಿಂದಿದ್ದಾರೆ. ಕಾಪ್ 677 ರೇಟಿಂಗ್ ಪಾಯಿಂಟ್ಸ್ನೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.
27ರ ಹರೆಯದ ದೀಪ್ತಿ 2 ಪಂದ್ಯಗಳಲ್ಲಿ ಒಟ್ಟು 8 ವಿಕೆಟ್ಗಳನ್ನು ಪಡೆದಿದ್ದು, ಭಾರತವು ವಡೋದರದಲ್ಲಿ ವಿಂಡೀಸ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸಲು ನೆರವಾಗಿದ್ದರು.
29 ಹಾಗೂ 52 ರನ್ ಗಳಿಸಿದ್ದ ಜೆಮಿಮಾ ರೋಡ್ರಿಗಸ್(537 ಪಾಯಿಂಟ್ಸ್)ಬ್ಯಾಟರ್ಗಳ ಪೈಕಿ 22ನೇ ರ್ಯಾಂಕ್ ತಲುಪಿದ್ದಾರೆ. ರಿಚಾ ಘೋಷ್(ಔಟಾಗದೆ 13, ಔಟಾಗದೆ 23)7 ಸ್ಥಾನ ಮೇಲಕ್ಕೇರಿ 41ನೇ ಸ್ಥಾನ ತಲುಪಿದ್ದಾರೆ.
ಸರಣಿಯಲ್ಲಿ 2 ಅರ್ಧಶತಕ ಗಳಿಸಿದ ಹೊರತಾಗಿಯೂ ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ(720 ಅಂಕ)ಒಂದು ಸ್ಥಾನ ಕೆಳಜಾರಿ 3ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಲೌರಾ ವೋಲ್ವಾರ್ಡ್ಟ್ ಹಾಗೂ ಶ್ರೀಲಂಕಾದ ಚಾಮರಿ ಅಥಪಥು(733)ಮೊದಲೆರಡು ಸ್ಥಾನದಲ್ಲಿದ್ದಾರೆ.
ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ 3 ಸ್ಥಾನ ಕಳೆದುಕೊಂಡು 13ನೇ ಸ್ಥಾನ ಪಡೆದಿದ್ದಾರೆ.