ಲೋಕಸಭೆಯಲ್ಲಿ ಎಐಎಂಐಎಂನ ಮೂವರು ಸಂಸದರಿದ್ದಿದ್ದರೆ, ಸರಕಾರ ವಕ್ಫ್ ಮಸೂದೆಯನ್ನು ಮರುಪರಿಗಣಿಸಬೇಕಾಗುತ್ತಿತ್ತು: ಸಂಸದ ಅಸದುದ್ದೀನ್ ಉವೈಸಿ

ಅಸದುದ್ದೀನ್ ಉವೈಸಿ | PC : PTI
ಹೈದರಾಬಾದ್: ವಕ್ಫ್ ಮಸೂದೆಯ ಪ್ರಸ್ತಾವಿತ ತಿದ್ದುಪಡಿಗಳ ವಿರುದ್ಧ ಮತ್ತೊಮ್ಮೆ ಧ್ವನಿ ಎತ್ತಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಒಂದು ವೇಳೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಹೆಚ್ಚು ಸಂಸದ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಿದ್ದರೆ, ಸರಕಾರವು ವಕ್ಫ್ ಮಸೂದೆ ಕುರಿತ ತನ್ನ ನಿಲುವನ್ನು ಮರುಪರಿಗಣಿಸಬೇಕಾದ ಒತ್ತಡಕ್ಕೆ ಒಳಗಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಎಐಎಂಐಎಂನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವೀಡಿಯೊದಲ್ಲಿ ಉವೈಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಮ್ಮ ಪಕ್ಷವನ್ನು ರಾಜಕೀಯವಾಗಿ ಬಲಿಷ್ಠಗೊಳಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.
“ಎಐಎಂಐಎಂ ತನ್ನ 67 ವರ್ಷಗಳ ಇತಿಹಾಸದಲ್ಲಿ ನಡೆಸಿರುವ ಮಹತ್ತರ ಸಂಘರ್ಷದಲ್ಲಿ ನಾನು ನಂಬಿಕೆಯಿರಿಸಿದ್ದೇನೆ. ಹೈದರಾಬಾದ್ ನಲ್ಲಿ ಮುಸ್ಲಿಮರು, ಹಿಂದೂಗಳು ಹಾಗೂ ದಲಿತರು ಕೇವಲ ಮತದಾರರು ಮಾತ್ರವಲ್ಲ; ಬದಲಿಗೆ ಹಕ್ಕುಗಳನ್ನು ಹೊಂದಿರುವ ಪ್ರಜೆಗಳೂ ಆಗಿದ್ದಾರೆ. ಆದರೆ, ಇನ್ನಿತರ ಪ್ರಾಂತ್ಯಗಳಲ್ಲಿನ ಜನರು ತಮ್ಮ ಮತ ಚಲಾಯಿಸಿದ ನಂತರ, ಆಡಳಿತ ಹಾಗೂ ನೀತಿ ನಿರ್ಧಾರಗಳಲ್ಲಿ ಯಾವುದೇ ಹಕ್ಕುಬದ್ಧ ಸ್ಥಾನ ಪಡೆಯದೆ ಮನೆಗೆ ತೆರಳುತ್ತಾರೆ” ಎಂದು ಅವರು ತಮ್ಮ ವೀಡಿಯೊದಲ್ಲಿ ಒತ್ತಿ ಹೇಳಿದ್ದಾರೆ.
ಐತಿಹಾಸಿಕ ಉಲ್ಲೇಖಗಳನ್ನು ಪ್ರಸ್ತಾಪಿಸಿರುವ ಅವರು, ಔರಂಗಾಬಾದ್ ಸಂಸದ ಇಮ್ತಿಯಾಝ್ ಜಲೀಲ್ ರನ್ನು ಪರಾಭವಗೊಳಿಸಲು, ಅವರ ವಿರುದ್ಧ ಎಲ್ಲ ಮೀರ್ ಜಾಫರ್ ಗಳು ಹಾಗೂ ಮೀರ್ ಸಾದಿಕ್ ಗಳು ಒಗ್ಗೂಡಿದ್ದರು ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಕಳೆದ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಮೂರು ಸಂಸದರೇನಾದರೂ ಚುನಾಯಿತರಾಗಿದ್ದಿದ್ದರೆ, ಕೇಂದ್ರ ಸರಕಾರವು ವಕ್ಫ್ ಮಸೂದೆಗೆ ತರಲು ಉದ್ದೇಶಿಸಿರುವ ಪ್ರಸ್ತಾವಿತ ತಿದ್ದುಪಡಿಗಳ ಕುರಿತು ಮರುಚಿಂತನೆ ನಡೆಸಬೇಕಾಗಿತ್ತಿತ್ತು ಎಂದೂ ಅವರು ಹೇಳಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆ, 2024 ವಿವಾದಾತ್ಮಕ ವಿಷಯವಾಗಿ ಬದಲಾಗಿದ್ದು, ಉವೈಸಿ ಹಾಗೂ ಇನ್ನಿತರ ಮುಸ್ಲಿಂ ನಾಯಕರು ಅದರಲ್ಲಿನ ನಿಯಮಗಳನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ವಕ್ಫ್ ಮಂಡಳಿಗೆ ಇಬ್ಬರು ಮುಸ್ಲಿಮೇತರ ಸದಸ್ಯರ ಸೇರ್ಪಡೆ ಹಾಗೂ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರವನ್ನು ಸರಕಾರಿ ಅಧಿಕಾರಿಗಳಿಗೆ ನೀಡುವುದು ಸೇರಿದಂತೆ ವಕ್ಫ್ ಮಂಡಳಿಗಳ ಆಡಳಿತದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವ ಪ್ರಸ್ತಾವವನ್ನು ಈ ಮಸೂದೆ ಒಳಗೊಂಡಿದೆ. ಈ ಬದಲಾವಣೆಗಳಿಂದ ವಕ್ಫ್ ಮಂಡಳಿಗಳ ಸ್ವಾಯತ್ತತೆ ದುರ್ಬಲಗೊಳ್ಳಲಿದ್ದು, ಮುಸ್ಲಿಂ ಸಮುದಾಯದ ಹಕ್ಕುಗಳು ದಮನಗೊಳ್ಳಲಿವೆ ಎಂದು ಮಸೂದೆಯ ಟೀಕಾಕಾರರು ಆರೋಪಿಸುತ್ತಿದ್ದಾರೆ.