ಬಿಜೆಪಿ ಗೆದ್ದರೆ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಹೊಸ ಕಾನೂನನ್ನು ತರಲಿದೆ : ಅಖಿಲೇಶ್ ಯಾದವ್ ಆರೋಪ
ಅಖಿಲೇಶ್ ಯಾದವ್ | PTI
ಸೋನ್ಭದ್ರ (ಉತ್ತರ ಪ್ರದೇಶ): ಒಂದು ವೇಳೆ ಬಿಜೆಪಿಯೇನಾದರೂ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಂಡರೆ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಸದ್ಯ ಹಿಂಪಡೆಯಲಾಗಿರುವ ಕೃಷಿ ಕಾಯ್ದೆಯಂತಹುದೇ ಕಾಯ್ದೆಯನ್ನು ತರಲಿದೆ ಎಂದು ಬುಧವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದರು.
ಒಂದು ವೇಳೆ ಇಂಡಿಯಾ ಮೈತ್ರಿಕೂಟವೇನಾದರೂ ಅಧಿಕಾರಕ್ಕೆ ಬಂದರೆ ದಾಖಲೆ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದೂ ಅವರು ಭರವಸೆ ನೀಡಿದರು.
ರಾಬರ್ಟ್ಸ್ಗಂಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಛೋಟೆಲಾಲ್ ಖಾರ್ವರ್ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಒಂದು ವೇಳೆ ಕೇಂದ್ರದಲ್ಲೇನಾದರೂ ಇಂಡಿಯಾ ಮೈತ್ರಿಕೂಟ ಸರಕಾರ ರಚಿಸಿದರೆ, ರೈತರ ಎಲ್ಲ ಸಾಲವನ್ನೂ ಮನ್ನಾ ಮಾಡಲಾಗುವುದು ಎಂದೂ ಆಶ್ವಾಸನೆ ನೀಡಿದರು.
"ರೈತರ ಭೂಮಿಗಳನ್ನು ಕಿತ್ತುಕೊಳ್ಳಲು ಕರಾಳ ಕಾಯ್ದೆಗಳನ್ನು ಜಾರಿಗೆ ತಂದಿದ್ದ ಮಂದಿಯೇ ಇದೀಗ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ ಯಾಚಿಸುತ್ತಿದ್ದಾರೆ. ರೈತರು ಒಟ್ಟಾಗಿ ಪ್ರತಿಭಟಿಸಿದ ನಂತರವಷ್ಟೆ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಯಿತು. ಈ ಕರಾಳ ಕಾಯ್ದೆಗಳನ್ನು ಹಿಂಪಡೆಯಲಾಗಿದ್ದರೂ, ನಾವೆಲ್ಲ ಎಚ್ಚರಿಕೆಯಿಂದಿರಬೇಕಾಗಿದೆ. ಒಂದು ವೇಳೆ ಅವರೇನಾದರೂ ಮರಳಿ ಅಧಿಕಾರಕ್ಕೆ ಬಂದರೆ, ರೈತರು ಹಾಗೂ ಆದಿವಾಸಿಗಳ ಭೂಮಿಯನ್ನು ಅತಿಕ್ರಮಿಸಲು ಅಂತಹುದೇ ಕಾನೂನನ್ನು ಜಾರಿಗೆ ತರಲಿದ್ದಾರೆ" ಎಂದು ಅವರು ಎಚ್ಚರಿಸಿದರು.